ಆ.೦೯ ರ ರೈತರ ಬೃಹತ್ ಹೋರಾಟಕ್ಕೆ ತಡೆ | ರೈತರಿಗೆ ಪರಿಹಾರ ಧನ ಒನ್ ಟೈಮ್ ಸೆಟ್ಲಮೆಂಟ್ ಗೆ ಆಗ್ರಹ | ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ವ್ಯಂಗ್ಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಚಾವತ್ ಆರೋಗದ ತೀರ್ಪಿನಂತೆ ರಾಜ್ಯ ಸರ್ಕಾರ ಕೃಷ್ಣಾ ನದಿ ನೀರನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಲು ವಿಫಲವಾಗಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳನ್ನೇ ಅಭಿವೃದ್ಧಿ ಎಂದುಕೊಂಡಿದ್ದಾರೆಂದು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ವ್ಯಂಗ್ಯವಾಡಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನದಿ ನೀರಿನ ಸಮರ್ಪಕ ಬಳಕೆಯಿಂದ ರೈತರ ಹೊಲಗದ್ದೆಗಳಲ್ಲಿ ನೀರು ಹರಿದು, ನಾಡು ಸಂಪದ್ಭರಿತ ವಾದಾಗ ಅದು ಅಭಿವೃದ್ಧಿ ಎಂದು ವಿವರಿಸಿದರು.
ಆಲಮಟ್ಟಿ ಆಣೆಕಟ್ಟು ೫೨೪ ಮೀ.ಗೆ ಹೆಚ್ಚಳಕ್ಕೆ ಮುಂದಾಗದ ಸರಕಾರದ ನಿರ್ಲಿಪ್ತ ಧೋರಣೆಯಿಂದ ಬೇಸತ್ತು ಅಕ್ಟೋಬರ್ ೦೯ ರಂದು ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ರೈತರಿಗೆ ಸ್ವಯಂ ಕಾಮಗಾರಿ ಕಾರ್ಯಕೈಗೊಳ್ಳಲು ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಹಾಗೂ ಗುದ್ದಲಿ, ಪಿಕಾಸಿ ಸಲಕರಣೆಗಳೊಂದಿಗೆ ಆಲಮಟ್ಟಿ ಗೆ ಆಗಮಿಸುವಂತೆ ಕರೆ ನೀಡಲಾಗಿತ್ತು. ಅಂದು ಬೃಹತ್ ಹೋರಾಟ ರೂಪಿಸಲು ಅದಕ್ಕೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಈಗ ಸರಕಾರ ೧೩೩ ಟಿಎಂಸಿ ನೀರು ಶೇಖರಣೆಗೆ ಕ್ರಮ ಕೈಗೊಳ್ಳಲು ಮುಂದಾಗಿ ರೂ.೭೦ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದೆ. ಹೀಗಾಗಿ ಆ.೦೯ ರ ರೈತರ ಬೃಹತ್ ಹೋರಾಟವನ್ನು ಸಧ್ಯಕ್ಕೆ ಕೈಬಿಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ರೈತರ ಮುಳುಗಡೆ ಜಮೀನಿಗೆ ಈಗಾಗಲೇ ದರ ಘೋಷಿಸಿದ್ದು, ಅದು ರೈತರಿಗೆ ತೃಪ್ತಿ ತಂದಿಲ್ಲ. ನೀರಾವರಿ ಜಮೀನಿಗೆ ಪ್ರತಿ ಎಕರೆಗೆ ರೂ.೫೦ ಲಕ್ಷ ಹಾಗೂ ಒಣ ಬೇಸಾಯ ಭೂಮಿಗೆ ರೂ.೪೦ ಲಕ್ಷ ರೂಗಳನ್ನು ಒನ್ ಟೈಮ್ ಸೆಟ್ಲಮೆಂಟ್ ಮಾಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಸರ್ಕಾರ ಹಿಂದೆ ನೀಡಿದ ಆಶ್ವಾಸನೆಗಳು ಸುಳ್ಳಾಗಿದ್ದರಿಂದ ರೈತರು ಈ ತೀರ್ಮಾನಕ್ಕೆ ಬಂದಿದ್ದು ಸರ್ಕಾರ ಇದನ್ನು ಬೇಗ ಈಡೇರಿಸಲಿ ಎಂದು ಚಂದ್ರಶೇಖರ್ ಆಗ್ರಹಿಸಿದರು.
ಹಿಂದೆ ೧೯೬೫-೬೬ ರಲ್ಲಿ ಮುಗಿದ ಶರಾವತಿ ಯೋಜನೆಯ ಸಂತ್ರಸ್ರರಿಗೆ ಈವರೆಗೂ ಪುನರ್ವಸತಿ ಸಮರ್ಪಕ ಆಗಿಲ್ಲವೆಂಬ ಆರೋಪಗಳಿವೆ. ಹೀಗಾಗಿ ಕೃಷ್ಣಾ ಯೋಜನೆ ಸಂತ್ರಸ್ತರಿಗೆ, ಮುಳುಗಡೆ ಹಳ್ಳಿಗಳ ಸಣ್ಣ ರೈತರಿಗೆ, ಕೂಲಿಕಾರ್ಮಿಕರಿಗೆ ಪುನರ್ವಸತಿ ಹಾಗೂ ಉದ್ಯೋಗ ನಿರ್ಮಾಣ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ತಕ್ಣಣವೇ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ ಜಮಖಂಡಿ, ಕಲ್ಮೇಶ ಲಿಗಾಡಿ, ಪ್ರ.ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಕಾರ್ಯದರ್ಶಿ ಬಸವರಾಜ ಕುಂಬಾರ, ವಿಜಯಪುರ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಬೋಗಿ, ರಾಯಚೂರು ಜಿಲ್ಲಾಧ್ಯಕ್ಷ ಶಿವಪುತ್ರಗೌಡ, ಶಂಕರಗೌಡ ಜಾರನಗೌಡರ, ಯಡ್ರಾಮಿ ತಾಲೂಕಾಧ್ಯಕ್ಷ ಈರಣ್ಣ ಭಜಂತ್ರಿ ಸೇರಿದಂತೆ ಹಲವರಿದ್ದರು.

ಜಲಸಂಪನ್ಮೂಲ ಸಚಿವರು ಬೆಂಗಳೂರಿಗೆ ಸೀಮಿತ
“ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಚ್ಚಿನ ಆಸ್ತಿಗಳು ಬೆಂಗಳೂರಿನಲ್ಲೇ ಇವೆ ಎಂದು ಕೇಳಲ್ಪಟ್ಟಿರುವೆ. ಹೀಗಾಗಿ ಅವರು ಅಲ್ಲೇ ಹೆಚ್ಚು ಕೇಂದ್ರೀಕೃತವಾಗಿದ್ದಾರೆ. ನೀರಾವರಿ ಬಗ್ಗೆ ಅವರು ಆಸಕ್ತಿಯನ್ನೇ ತೋರಿಸುತ್ತಿಲ್ಲ. ಬೆಂಗಳೂರೇ ಅವರಿಗೆ ಮಹತ್ವವೆಂದರೆ ಅವರು ಬೆಂಗಳೂರಿಗೇ ಸೀಮಿತವಾಗಿ ನೀರಾವರಿ ಖಾತೆಯನ್ನು ಬೇರೆಯವರಿಗೆ ವಹಿಸಿಕೊಡಲಿ.”
– ಕೋಡಿಹಳ್ಳಿ ಚಂದ್ರಶೇಖರ್
ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ

