ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಲ್ಲ ನಿಷೇಧಾತ್ಮಕ ಮನೋಭಾವನೆಗೆ ದಿವ್ಯ ಔಷಧಿಯೇ ನಮ್ಮಲ್ಲಿರುವ ಆತ್ಮವಿಶ್ವಾಸ. ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮಾಡುವ ಯಾವುದೇ ಕೆಲಸ-ಕಾರ್ಯದ ಬಗ್ಗೆ ಕೀಳರಿಮೆ, ನನಗೆ ಸಾಧ್ಯವಿಲ್ಲ, ನನ್ನಿಂದ ಅಸಾಧ್ಯ, ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಸಾಧಿಸಿಯೇ ತೀರುತ್ತೇನೆಂಬ ದೃಢ ಸಂಕಲ್ಪ ಮಾಡಬೇಕು. ಸಾಧಕರು ನಮ್ಮಂತೆ ಸಾಮಾನ್ಯರಾಗಿ ಅಸಾಮಾನ್ಯವಾದ ಸಾಧನೆಗೈದಿದ್ದಾರೆ ಎಂದು ರಮೇಶ ಬಲ್ಲಿದ ಅಭಿಪ್ರಾಯಪಟ್ಟರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ೨೦೨೫-೨೬ ನೇಯ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರೆಡಕ್ರಾಸ್, ಎನ್.ಎಸ್.ಎಸ್ ಮತ್ತು ವಿವಿಧ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಅಂಕ, ಪದವಿ, ಉದ್ಯೋಗ ಅಥವಾ ನೌಕರಿಗಾಗಿ ಪಡೆಯದೇ ಪಡೆದ ಜ್ಞಾನದಿಂದ ತಂದೆ-ತಾಯಿ, ಸಮಾಜ, ಸಮುದಾಯ ಮತ್ತು ರಾಷ್ಟ್ರಕ್ಕೆ ಏನನ್ನಾದರೂ ಕೊಡುಗೆ ನೀಡಿ ಋಣ ತೀರಿಸಬೇಕು. ವಿದ್ಯೆಯ ಜತೆಗೆ ಜೀವನದಲ್ಲಿ ಸಂಸ್ಕೃತಿ-ಸಂಸ್ಕಾರ, ಮೌಲ್ವಿಕ, ನೈತಿಕ, ವೈಚಾರಿಕ ಮತ್ತು ಜೀವನಾದರ್ಶಗಳನ್ನು ಅಳವಡಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮೀತಿ ಸದಸ್ಯ ಬಿ.ಎಸ್.ಜನಗೊಂಡ ಮಾತನಾಡಿ, ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗಿಂತ ಯಾವುದರಲ್ಲಿ ಕಮ್ಮಿಯಿಲ್ಲ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆಗೈಯುತ್ತಾ ಕಾಲೇಜಿನ ಕೀರ್ತಿ ಹೆಚ್ಚಿಸಬೇಕೆಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅವರು ಮಾತನಾಡಿ, ವಿದ್ಯಾರ್ಥಿಯ ಸರ್ವಾಂಗೀಣ ವ್ಯಕ್ತಿತ್ವ ವಿಕನಸಕ್ಕೆ ಪಠ್ಯೇತರ ಚಟುವಟಕೆಗಳು ಪೂರಕವಾಗಿವೆ. ಆದ್ದರಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತಮ್ಮಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ಹೊಂದಿದ ಡಾ. ಎ.ಐ.ಹಂಜಗಿ, ಡಾ. ಸಿಎಸ್.ಆನೂರ, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಜುಡೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಭಿಷೇಕ ಕಾಳೆ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡ ಶ್ರೀಮತಿ ಸರ್ವಶ್ರೀ ಚಟ್ಟೇರ ಹಾಗೂ ಪ್ರೊ.ಮೇಘರಾಜ ನಾಯಕ ಇವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಿ.ಡಿ.ಸಿ ಸದಸ್ಯ ವ್ಹಿ.ಸಿ.ಕುಲಕರ್ಣಿ, ಸಾಂಸ್ಕೃತಿಕ ಕಾರ್ಯದರ್ಶಿ ಡಾ. ಚಂದ್ರಕಾಂತ.ಬಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ.ಸಂಗಮೇಶ ಗುರವ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ವಿಶಾಲಾಕ್ಷೀ ಹೊನ್ನಾಕಟ್ಟಿ, ಎನ್.ಎಸ್.ಎಸ್ ಘಟಕಗಳ ಸಂಯೋಜಕರಾದ ಪ್ರೊ.ಸುನೀಲ ತೋಂಟಾಪೂರ, ಡಾ.ದೇವೆಂದ್ರಗೌಡ ಪಾಟೀಲ, ಪ್ರೊ.ಸುನೀಲ ಹತ್ತಿ, ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್‌ನ ಸಂಚಾಲಕ ಡಾ.ಪ್ರಕಾಶ ಹಾವೇರಿಪೇಟ, ಡಾ.ಮಮತಾ ಬನ್ನೂರ, ಹಾಗೂ ವಿದ್ಯಾರ್ಥಿನಿ ಪ್ರತಿನಿಧಿ ಅವರು ವೇದಿಕೆಯ ಮೇಲಿದ್ದರು.
ತನ್ಮಯಿ ಚಲವಾದಿ ಪ್ರಾಥನಾ ಗೀತೆ ಪ್ರಚುರಪಡಿಸಿದರು. ಡಾ.ಶಿವಾನಂದ ಜಮಾದಾರ ಸ್ವಾಗತಿಸಿದರು. ಪ್ರೊ.ಸಿದ್ರಾಮ ಯರನಾಳ ಮಾಲಾರ್ಪಣೆ ನಡೆಸಿಕೊಟ್ಟರು. ಡಾ.ಚಂದ್ರಕಾಂತ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಆರ್.ಕೆ.ತೇಲಿ ಪರಿಚಯಿಸಿದರು. ಪ್ರೊ.ಸುನೀಲ ಹತ್ತಿ ಪ್ರಜಾಪ್ರಭುತ್ವ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ.ರೋಹಿಣಿ ಹಿರೇಶೆಡ್ಡಿ ನಿರೂಪಿಸಿದರು. ಡಾ.ಸಿರೀನ ಸುಲ್ತಾನ ಇನಾಮದಾರ ವಂದಿಸಿದರು.

