ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಡಾ.ಅಂಬೇಡ್ಕರ್ ಉದ್ಯಾನವನದಲ್ಲಿ ಬುಧವಾರ ಪುರಸಭೆ ಹಮ್ಮಿಕೊಂಡಿದ್ದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಂಗವಾಗಿ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು,ಮುಖ್ಯಾಧಿಕಾರಿ, ಸದಸ್ಯರು, ಸಿಬ್ಬಂದಿ ಶ್ರಮದಾನ ಮಾಡಿದರು.
ಜನ ಸಮುದಾಯದಲ್ಲಿ ಸ್ವಚ್ಛತೆಯ ಆಶಯಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಆಚರಿಸಲಾಗುತ್ತಿರುವ ಸೆ.17 ರಿಂದ ಅಕ್ಟೋಬರ್ 2 ರ ವರೆಗಿನ 15 ದಿನಗಳ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಪುರಸಭೆಯಿಂದ ಚಾಲನೆ ನೀಡಲಾಯಿತು.
ಪಟ್ಟಣದ ಸ್ವಚ್ಛತೆಗೆ ಪಣ ತೊಟ್ಟು, ಶಾಲಾ ಕಾಲೇಜು, ದೇವಾಲಯ ಆವರಣಗಳು ಹಾಗೂ ರಸ್ತೆಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಪ್ರತಿಯೊಬ್ಬರು ಸ್ವಚ್ಛತೆಯ ಅಭಿಯಾನದಲ್ಲಿ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡು ಸಂಪೂರ್ಣ ಕಸಮುಕ್ತ ಹಾಗೂ ಸ್ವಚ್ಛ ಬಸವನಬಾಗೇವಾಡಿ ಪಟ್ಟಣವನ್ನಾಗಿ ಬದಲಾಯಿಸಲು ಶ್ರಮಿಸಬೇಕೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಸೇರಿದಂತೆ ಮಾಜಿ, ಹಾಲಿ ಸದಸ್ಯರು ಹಾಗೂ ಮುಖಂಡರುಗಳು, ಪೌರ ಕಾರ್ಮಿಕರು, ಸಿಬ್ಬಂದಿಗಳು ಇದ್ದರು.

