ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಭೀಮಾ ನದಿಯ ನದಿ ಪಾತ್ರದ ಭಾಗದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಹಾಗೂ ಕರ್ನಾಟಕದಲ್ಲಿಯೂ ಕೂಡ ಎಡಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಬೀಮ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ
ಈಗಾಗಲೇ ಉಜನಿ ಜಲಾಶಯದಿಂದ ಬಿಟ್ಟಿರುವ 1 ಲಕ್ಷ ಕ್ಯೂಸೆಕ್ ನೀರು ನದಿ ಅಫ್ಜಲಪುರ ಭಾಗಕ್ಕೆ ಹರಿದು ಬಂದಿದ್ದು ಅಲ್ಲದೇ ಅಫ್ಜಲಪುರ ತಾಲ್ಲೂಕಿನಲ್ಲಿ ಭೀಮಾ ನದಿಗೆ ಸೇರುವ ಬೋರಿ ಹಳ್ಳಕ್ಕೂ ಕೂಡ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಅಲ್ಲದೇ ವಿಜಯಪುರ ಜಿಲ್ಲೆಯ ಆಲಮೇಲ, ಸಿಂದಗಿ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಲೂ ಕೂಡ ಭೀಮಾನದಲ್ಲಿ ನೀರು ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ
ದೇವಣಗಾಂವ ಸಮೀಪ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೊನ್ನ ಬ್ಯಾರೇಜ್ ಗೆ ಒಟ್ಟು 1 ಲಕ್ಷ 60 ಸಾವಿರ ಒಳ ಹರಿವು ಹಾಗೂ 1ಲಕ್ಷ 70 ಸಾವಿರ ಹೊರಹರಿವು ಇದೆ ಎಂದು ಅಫಜಲಪುರದ ಕೆ ಎನ್ ಎನ್ ಎಲ್ ಇ ಇ ಶಿವಕುಮಾರ ಸ್ವಾಮಿ ತಿಳಿಸಿದ್ದಾರೆ
ಈಗಾಗಲೇ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದ್ದು, ಘತ್ತರಗಿ ಬಗಲೂರು ಬ್ಯಾರೇಜ್, ಗಾಣಗಾಪುರ ಇಟಗಿ ಬ್ಯಾರೇಜ್, ದೇವಣಗಾಂವ ಶಿವಪುರ ಬ್ಯಾರೇಜ್ ಮೇಲೆ
ನೀರು ಹರಿಯುತ್ತಿರುವುದರಿಂದ ಈ ಎರಡು ಭಾಗದ ಸಂಪರ್ಕ ಕಡಿತಗೊಂಡಿದೆ
ಬುಧವಾರ ರಾತ್ರಿ ಸುರಿದ ಮಳೆಗೆ ಈ ಭಾಗದಲ್ಲಿ ರೈತರ ಅನೇಕ ಜಮೀನುಗಳು ಜಲಾವೃತಗೊಂಡಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ ಇದರಿಂದ ರೈತರ ಬೆಳೆಗಳು ನಾಶವಾಗುವ ಆತಂಕ ಎದುರಾಗಿ ರೈತರು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ
ಅಪಾರ ಪ್ರಮಾಣದ ನೀರು, ನದಿಯಲ್ಲಿ ಹರಿದು ನದಿ ಪಾತ್ರದಲ್ಲಿರುವ ಹಾಗೂ ತಗ್ಗು ಪ್ರದೇಶದಲ್ಲಿರುವ ಸಾವಿರಾರು ಎಕರೆ ಬೆಳೆಗಳು ನಾಶವಾಗಿ ಹೋಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಈಗ ಮತ್ತೆ ನದಿಯಲ್ಲಿ ಲಕ್ಷಾಂತರ ಪ್ರಮಾಣದ ನೀರು ಬರುತ್ತಿರುವುದು ನದಿ ಪಾತ್ರದ ಗ್ರಾಮಗಳ ಜನರಿಗೆ ಆತಂಕವನ್ನು ಉಂಟು ಮಾಡಿದೆ.
ಆಲಮೇಲ ತಾಲೂಕಿನ ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೆವಾಡ, ಶಂಬೆವಾಡ, ಕುಮಸಗಿ, ಚಿಕ್ಕಹವಳಗಿ, ಬಗಲೂರ ಗ್ರಾಮಗಳ ಜನರ ಆತಂಕ ಹೆಚ್ಚಿಸಿದೆ
ಈಗಾಗಲೇ ಕಳೆದ ಎರಡು ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ತೊಂದರೆಗೊಳಗಾಗಿದ್ದಾರೆ ಬೆಳೆಗಳು ಹಾಳಾಗಿವೆ. ಗಾಯದ ಮೇಲೆ ಬರೆ ಎನ್ನುವಂತೆ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ನದಿಯ ಸಮೀಪವಿರುವ ಗ್ರಾಮಗಳ ಮನೆಗಳಲ್ಲಿ ವಿಷಜಂತುಗಳ ಹಾವಳಿ ಹೆಚ್ಚಾಗಿ ಜನರಿಗೆ ತೊಂದರೆಯಾಗುತ್ತಿದೆ.

