ಶಾಲಾ-ಕಾಲೇಜಿನಲ್ಲಿ ಆಂಟಿ ಡ್ರಗ್ ಘಟಕ ಮೂಲಕ ಜಾಗೃತಿ ಮೂಡಿಸಿ | ಜಿಲ್ಲಾಧಿಕಾರಿ ಡಾ.ಆನಂದ. ಕೆ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಮಾದಕ ದ್ರವ್ಯ ಕಡಿವಾಣಕ್ಕಾಗಿ ಮಾದಕ ದ್ರವ್ಯಗಳ ಸೇವನೆಯಿಂದ ಜನರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಕಾಲೇಜಿನಲ್ಲಿ ಆಂಟಿ ಡ್ರಗ್ ಘಟಕ ಸ್ಥಾಪಿಸಿ, ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಾದಕ ದ್ರವ್ಯ-ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಶಾಲಾ ಕಾಲೇಜ್‌ಗಳಲ್ಲಿ ನಿರ್ಮಿಸಿದ ಆಂಟಿ ಡ್ರಗ್ ಘಟಕಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಇದರ ಕಾರ್ಯ ವೈಖರಿಯ ಕುರಿತು ನೋಡಲ್ ಅಧಿಕಾರಿಗಳು ಕಾಲಕಾಲಕ್ಕೆ ನಿರ್ದೇಶನ ನೀಡಿ, ಪ್ರತಿ ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಚರ್ಚಾ ಸ್ಪರ್ಧೆ,ಪ್ರಬಂಧ ಸ್ಪರ್ಧೆಯಂತಹ ಚಟುವಟಿಕೆಯ ಮೂಲಕ ಮಾದಕ ವಸ್ತು-ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ಸಂಬAಧಿಸಿದ ಇಲಾಖೆಗಳು ಸಮನ್ವಯ ಸಾಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ನೋಡಿಕೊಳ್ಳಲು, ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕ ಸಾಧಿಸಿ, ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರ ಮೇಲೆ ಕ್ರಮ ವಹಿಸಬೇಕು. ಅನಧಿಕೃತ ಮದ್ಯ ಮಾರಾಟ ಮಾಡುವವರ ಟ್ರೇಡ್ ಲೈಸೆನ್ಸ್ ರದ್ಧುಪಡಿಸಲು ಕ್ರಮ ವಹಿಸಿ ತೆಗೆದುಕೊಂಡ ಕ್ರಮದ ಮಾಹಿತಿ ಸಭೆಗೆ ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.
ಅಬಕಾರಿ ಇಲಾಖೆಯು ಆಗಸ್ಟ್ ಮಾಹೆಯಲ್ಲಿ ೧೧೯ ದಾಳಿ ಕೈಗೊಂಡಿದ್ದು, ಈ ಪೈಕಿ ೧೦ ಘೋರ ಪ್ರಕರಣಗಳು, ದಾಬಾ ಹೊಟೇಲ್ ಸಾರ್ವಜನಿಕ ಸ್ಥಳಗಳಲ್ಲಿ ೩೯ ಪ್ರಕರಣಗಳು, ಸನ್ನದುಗಳ ಅಂಗಡಿಯಲ್ಲಿ ೧೫ ಪ್ರಕರಣಗಳು ಸೇರಿದಂತೆ ಒಟ್ಟು ೬೪ ಪ್ರಕರಣಗಳನ್ನು ದಾಖಲಿಸಿಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮುರಳೀಧರ ಎಚ್ ಒ ಅವರು ಸಭೆಗೆ ಮಾಹಿತಿ ನೀಡಿದರು.
ನಶಾ ಮುಕ್ತ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಆಯಾ ತಾಲೂಕಿನ ವೈದ್ಯಾಧಿಕಾರಿಗಳು ಒಳರೋಗಿ,ಹೊರರೋಗಿ ಕೈಗೊಂಡ ವೈದ್ಯಕೀಯ ಚಿಕಿತ್ಸೆ ಔಷಧೋಪಚಾರ ಬಗ್ಗೆ ನಿಗಾ ವಹಿಸಿ ಮಾಹಿತಿಯನ್ನು ಸಂಬAಧಿಸಿದವರಿಗೆ ವರದಿ ಮಾಡಬೇಕು.ಕ್ರೋಡೀಕೃತ ಮಾಹಿತಿ ಮುಂಬರುವ ಸಭೆಗೆ ಮಾಹಿತಿಯೊಂದಿಗೆ ಅಗಮಿಸಬೇಕು.ಜಿಲ್ಲಾ ಆರೋಗ್ಯ ಇಲಾಖೆಯ ಮೂಲಕ ಸೇವನೆಗೊಳಗಾದವರನ್ನು ಪರೀಕ್ಷೆಗೆ ಒಳಪಡಿಸಲು ಕ್ರಮ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸಮಗ್ರವಾಗಿ ಪಟ್ಟಿಮಾಡಿ ಮಾಹಿತಿ ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ದಿನದ ಇಪ್ಪತ್ನಾಲ್ಕು ಗಂಟೆ ಕಾರ್ಯ ನಿರ್ವಹಿಸುತ್ತಿರುವ ಟೆಲಿ ಮನಸ್ ಸಹಾಯವಾಣಿ ಸಂಖ್ಯೆ ೧೪೪೧೬ಕ್ಕೆ ಕರೆಮಾಡಿ ಕೌನ್ಸೆಲಿಂಗ್ ಪಡೆಯುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಈ ಮಾಹಿತಿಯನ್ನು ಎಲ್ಲ ಶಾಲಾ ಕಾಲೇಜಿನಲ್ಲಿ ಪ್ರದರ್ಶಿಸಬೇಕು. ಮಾದಕ ದ್ರವ್ಯ ಬೆಳೆಯುವಂತಹ ಸಸಿ ಗಿಡಗಳ ಮೇಲೆ ಅರಣ್ಯ ಇಲಾಖೆ ನಿರಂತರವಾಗಿ ನಿಗಾ ಇರಿಸಬೇಕು ಇಂತಹ ಸಸಿ-ಗಿಡಗಳು ಕಂಡು ಬಂದಲ್ಲಿ ಕೂಡಲೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಔಷಧದ ಮಳಿಗೆಗಳಲ್ಲಿ ಕಡ್ಡಾಯವಾಗಿ ವೈದ್ಯರ ಅನುಮತಿ ಪಡೆದು ಔಷಧ ಮಾರಾಟಕ್ಕೆ ಕ್ರಮ ವಹಿಸಬೇಕು. ಜಿಲ್ಲೆಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ೨೦೨೩ರಲ್ಲಿ ೨೯ ಪ್ರಕರಣಗಳನ್ನು ದಾಖಲಿಸಿ, ೨೯೬ ಕೆ.ಜಿ ೪೦೩ ಗ್ರಾಂ ಮಾದಕ ದ್ರವ್ಯ ಜಪ್ತಿ ಮಾಡಲಾಗಿದ್ದು, ೨೦೦ ಕೆ.ಜಿ ೪೦೦ ಗ್ರಾಂ ಗಾಂಜಾ ನಾಶಪಡಿಸಲಾಗಿದೆ. ೨೦೨೪ನೇ ಸಾಲಿನಲ್ಲಿ ೨೮ ಪ್ರಕರಣಗಳನ್ನು ದಾಖಲಿಸಿಕೊಂಡು, ೨೯೭ ಕೆ.ಜಿ ೮೭೨ ಗ್ರಾಂ ಗಾಂಜಾ ಜಪ್ತಿ ಮಾಡಿದ್ದು ೩೭೩ ಕೆ.ಜಿ. ೫೭೪ಗ್ರಾಂ ಗಾಂಜಾ ನಾಶಪಡಿಸಲಾಗಿದೆ. ೨೦೨೫ರಲ್ಲಿ ೨೫ ಪ್ರಕರಣಗಳನ್ನು ದಾಖಲಿಸಿ ೨೯೫ಕೆ.ಜಿ ೫೬೭ ಗ್ರಾಂ ಗಾಂಜಾ ಜಪ್ತಿ ಮಾಡಿದ್ದು ಈ ಅವಧಿಯಲ್ಲಿ ೨೮೩ ಕೆ.ಜಿ ೮೦೮ ಗ್ರಾಂ ಗಾಂಜಾ ಹಾಗೂ ೧೮ ಕೆ.ಜಿ. ೪೩೨ ಗ್ರಾಂ ಅಫೀಮು ವಶಪಡಿಸಿಕೊಂಡು ನಾಶ ಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ,ಇಂಡಿ ಉಪ ವಿಭಾಗಾಧಿಕಾರಿ ಶ್ರೀಮತಿ ಅನಿರಾಧಾ ವಸ್ತ್ರದ,ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಿಂ ಬಾಬಾ,ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

