ಕಲಾವಿಕಾಸ ಪರಿಷತ್ ನಿಂದ ಪುಟ್ಟರಾಜರ ೧೫ ನೆಯ ಪುಣ್ಯಸ್ಮರಣೆ ಆಚರಣೆ
ಉದಯರಶ್ಮಿ ದಿನಪತ್ರಿಕೆ
ಗದಗ: ಕುರುಡರಾಗಿದ್ದರೂ ಕೂಡ ಅಂಧ, ಅನಾಥ ಮಕ್ಕಳಿಗೆ ತಂದೆಯಾಗಿ, ಪೋಷಕರಾಗಿ, ಸಂಗೀತದ ಗುರುವಾಗಿ, ಪುರಾಣ ಪ್ರವಚನಕ್ಕೆ ಪ್ರೇರಕರಾಗಿ ಶತಮಾನದ ಹತ್ತಿರದ ಇಡೀ ಬದುಕನ್ನು ದಿಕ್ಕಿಲ್ಲದ ಮಕ್ಕಳಿಗೆ ಬದುಕುವ ವಿದ್ಯೆ ನೀಡಿದ ಪಂಡಿತ ಪುಟ್ಟರಾಜ ಗವಾಯಿಗಳು ನೋಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದರು. ಅವರ ಸಾಹಿತ್ಯ ಕಣ್ಣಿದ್ದವರನ್ನೂ ಬೆರಗುಗೊಳಿಸಿತ್ತು ಎಂದು ಅನ್ನದಾನಿ ಹಿರೇಮಠ ಅವರು ಹೇಳಿದರು. ಅವರು, ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ, ಉತ್ತರ ಕನಾರ್ಟಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ ಗದುಗಿನ ಕಲಾವಿಕಾಸ ಪರಿಷತ್ತಿನವರು ಏರ್ಪಡಿಸಿದ ಪಂಡಿತ ಪುಟ್ಟರಾಜ ಗವಾಯಿಗಳ ೧೫ ನೆ ಪುಣ್ಯ ಸ್ಮರಣೆಯನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಹೇಳಿದರು.
ಮುಖ್ಯ ಅತಿಥಿಯಾಗಿ ಭಾವಹಿಸಿದ್ದ ವಿಭೂತಿ ಪತ್ರಿಕೆ ಸಂಪಾದಕ ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ ಅವರು, ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಗದಗ ಬೆಟಗೇರಿ ಜನರು ಜಾತ್ಯಾತೀತ ವಾಗಿ ಭಕ್ತಿಯಿಂದ ಪ್ರೀತಿಯಿಂದ ಅಭಿಮಾನದಿಂದ ಅಂತಿಮ ನಮನದಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು.
ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎಸ್ .ವಾಯ್. ಚಿಕ್ಕಟ್ಟಿ ಅವರು, ಸಮಾರಂಭದ ಅಧ್ಯಕ್ಷತೆವಹಿಸಿ, ಪುಟ್ಟರಾಜ ಗವಾಯಿಗಳೊಂದಿಗಿನ ಒಡನಾಟವನ್ನು ನೆನಪಿಸಿಕೊಳ್ಳುವುದರಂದಿಗೆ ಕಲಾ ವಿಕಾಸ ಪರಿಷತ್ ಸಿ. ಕೆ. ಹೆಚ್. ಶಾಸ್ತ್ರೀಯವರು ೧೫ ವರ್ಷಗಳಿಂದ ಪೂಜ್ಯರ ಪುಣ್ಯಸ್ಮರಣೆಯನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸುತ್ತಿರುವುದು ನಮ್ಮ ಸಂಸ್ಥೆಯ ಭಾಗ್ಯವಿಶೇಷವೆಂದು ಹೇಳಿದರು.
ಪ್ರಾರಂಭದಲ್ಲಿ ಚಿಕ್ಕಟ್ಟಿ ಸಿಬಿಎಸ್ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ವೇ. ಫಕ್ಕೀರೇಶ್ವರ ಶಾಸ್ತ್ರೀಗಳು ಹಿರೇಮಠ ಇವರು, ಸರ್ವರನ್ನು ಸ್ವಾಗತಿಸಿದರು. ಕಲಾವಿಕಾಸ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಪಂ. ಸಿ.ಕೆ.ಎಚ್. ಶಾಸ್ತ್ರಿಗಳು (ಕಡಣಿ) ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾವಿಕಾಸ ಪರಿಷತ್ತು ನಡೆದು ಬಂದ ದಾರಿಯನ್ನು ಸ್ಮರಿಸಿ ಪುಟ್ಟರಾಜ ಗವಾಯಿಗಳ ಸಂಗೀತ ಬದುಕಿನ ಹಲವಾರು ಸಾಧನೆಗಳನ್ನು ಮೆಲುಕು ಹಾಕಿದರು.
ವೇದ ಮಂತ್ರಗಳ ಪಠಣೆಯಂದಿಗೆ ಪೂಜ್ಯ ಗುರು ಪುಟ್ಟರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು. ಶಿಕ್ಷಕ ಸಾಹಿತಿ ಶ್ರೀಶೈಲ ಬಡಿಗೇರ ಇವರು ಪುಟ್ಟರಾಜ ಗುರುಗಳ ಕುರಿತು ಸ್ವರಚಿತ ಕವನಗಳ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾದ ಜೆ.ಪಿ.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ, ಡಾ. ಬಿ. ಬಿ. ಹೊಳಗುಂದಿ ಅವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಪರವಾಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸಿಬ್ಬಂದಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಿ.ಬಿ.ಎ. ಕಾಲೇಜಿನ ಪ್ರಾಚಾರ್ಯ ಬಿಪಿನ್ ಚಿಕ್ಕಟ್ಟಿ, ಪ್ರಾ. ಶೋಭಾ ಸ್ಥಾವರಮಠ, ಪ್ರಾ. ರಿಯಾನಾ ಮುಲ್ಲಾ, ವೇದಿಕೆಯಲ್ಲಿ ಇದ್ದರು.
ಶಿಕ್ಷಕಿ ರಜನಿ ಕುರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗಣೇಶ ಬಡ್ನಿ ವಂದಾರ್ಪಣೆ ಮಾಡಿದರು. ಸಿ. ಕೆ.ಹೆಚ್. ಶಾಸ್ತ್ರೀಯವರು ರಚಿಸಿದ ಪುಟ್ಟರಾಜ ಗುರುಗಳ ಗೀತೆಗಳಿಗೆ ಚಿತ್ರಿಕರಿಸಿದ ವಿಡಿಯೊ ಪ್ರದರ್ಶನಮಾಡುವುದರೊಂದಿಗೆ ಪುಣ್ಯಸ್ಮರಣೆಗೆ ಮಂಗಳ ಹಾಡಲಾಯಿತು.

