ಮಾಜಿ ಶಾಸಕ ಶರಣಪ್ಪ ಸುಣಗಾರ ಆರೋಪ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇವರ ಹಿಪ್ಪರಗಿ ಶಾಸಕರ ಒತ್ತಡ ಮತ್ತು ಕುಮ್ಮಕ್ಕಿನ ಮೇರೆಗೆ ಶಾಸಕರಂತೆ ವರ್ತನೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕೂಡಲೇ ಶಿಸ್ತಿನ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪಟ್ಟಣದ ಅವರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನ ಬಂದಂತಹ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು. ಕುದರಸಾಲುವಾಡಗಿ ಗ್ರಾಮ ಪಂಚಾಯತ್ ಅತಿಕ್ರಮಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಿಲ್ಲಾ ಮುಖ್ಯ ರಸ್ತೆ ಹಾಯ್ದು ಹೋದ ಕಾರಣ ರಸ್ತೆಯ ಮಧ್ಯ ಭಾಗದಿಂದ ಎಡ ಮತ್ತು ಬಲ ಸೇರಿ ೬ಮೀಟರ್ ಇರಬೇಕು ಎಂದು ಸರಕಾರದ ನಿಯಮಾವಳಿ ಇದೆ. ಆದರೆ ಇವೆಲ್ಲವನ್ನು ಗಾಳಿಗೆ ತೂರಿ ಎರಡು ಬದಿಯಲ್ಲಿರುವ ಕಳೆದ ೫೦ವರ್ಷಗಳಿಂದ ವಾಸವಾಗಿ ಕಟ್ಟಿಕೊಂಡ ಮನೆ, ಅಂಗಡಿ, ಸಮುದಾಯ ಭವನಗಳನ್ನು ಶಾಸಕರು ದುರಾಡಳಿತ, ಅಧಿಕಾರದ ದಾಹ, ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡು ಎಲ್ಲ ಆಸ್ತಿ ಪಾಸ್ತಿಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಅಲ್ಲಿಯ ಬಡ ಕುಟುಂಬಗಳಿಗೆ ನಿರ್ಗತಿಕರನ್ನಾಗಿ ಮಾಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಜನರಿಗೆ ಅನ್ಯಾಯ ಮಾಡಿದ್ದನ್ನು ಗ್ರಾಮದ ಶಾಂತಗೌಡ ಬಿರಾದಾರ, ಅಶೋಕ ಪಾಟೀಲ, ಡಾ.ಹಸನಸಾಬ್ ಕೊಕಟನೂರ ಇವರಿಂದ ಈಗಾಗಲೇ ಜಿಲ್ಲಾಧಿಕಾರಿ, ಸಿಇಒ ಅವರಿಗೆ ಸರಕಾರದ ಸುತ್ತೋಲೆ ಪ್ರಕಾರ ನಿಯಮಾವಳಿ ಮೀರದೆ ಅನುಮತಿ ಪಡೆಯದೇ ತೆರವುಗೊಳಿಸಬಾರದು ಎಂದು ಮನವಿಯನ್ನು ನೀಡಲಾಗಿದೆ ಎಂದರು.
ಈ ವೇಳೆ ಪೀರು ಕೆರೂರ, ಸಾಯಬಣ್ಣ ಬಾಗೇವಾಡಿ, ಸೋಮು ಜಮಾದಾರ, ಪರಶುರಾಮ ಕಾಮಣಕೇರಿ, ದಿಗಂಬರ ನಾಟೀಕಾರ, ರಾಜು ರೋಡಗಿ, ಮಹಾದೇವ ತಾಂಬೆ, ಸಿದ್ದು ಕೊಂಡಗೂಳಿ, ನಾಗೇಶ ತಾಂಬೆ ಸೇರಿದಂತೆ ಅನೇಕರಿದ್ದರು.

