ಸರಕಾರಕ್ಕೆ ಗಡುವು ನೀಡಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಪರಿಹಾರವನ್ನು ೩ ಆರ್ಥಿಕ ವರ್ಷದ ಹಂತದಲ್ಲಿ ಕೊಡುವ ನಿರ್ಣಯ ಕೈಗೊಂಡಿರುವದನ್ನು ಸರಕಾರವು ಕೈಬಿಟ್ಟು ಇದೇ ೨೦೨೬ರ ಮಾರ್ಚ ತಿಂಗಳಿನ ಬಜೆಟ್‌ನ ಒಳಗಾಗಿ ಅವಳಿ ಜಿಲ್ಲೆಯ ರೈತರಿಗೆ ಒಂದೇ ಹಂತದಲ್ಲಿ ವಿತರಣೆ ಮಾಡಬೇಕು ಇಲ್ಲದಿದ್ದರೆ ಮುಂದೊಂದು ದಿನ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸರಕಾರಕ್ಕೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಗಡುವು ನೀಡಿದರು.
ಪಟ್ಟಣದ ಯುಕೆಪಿ ವೃತ್ತದಲ್ಲಿ ಪ್ರವಾಸಿ ಮಂದಿರದ ಎದುರುಗಡೆ ಆಲಮಟ್ಟಿ ಆಣೆಕಟ್ಟನ್ನು ೫೨೪ ಮೀ ಎತ್ತರ ಏರಿಸುವದರಿಂದ ಮುಳಗಡೆಯಾಗುವ ರೈತರ ಜಮೀನುಗಳಿಗೆ ನೀರಾವರಿ ಒಂದು ಎಕರೆಗೆ ೫೫ ಲಕ್ಷ ರೂ, ಒಣ ಬೇಸಾಯಕ್ಕೆ ೪೫ ಲಕ್ಷ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸಿ ನಡೆದ ಸರದಿ ಉಪವಾಸ ಸತ್ಯಾಗ್ರಹವನ್ನು ಅವಳಿ ಜಿಲ್ಲೆಯ ರೈತರ ಹಾಗೂ ಗಣ್ಯ ಮಾನ್ಯರ ಜನಪ್ರತಿನಿಧಿಗಳ ಸೂಚಣೆ ಮೇರೆಗೆ ತಾತ್ಕಾಲಿಕವಾಗಿ ಹಿಂತೆಗೆದುಕೊಂಡ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಅವಳಿ ಜಿಲ್ಲೆಯಲ್ಲಿ ಬಾಗಲಕೋಟ, ಬೀಳಗಿ, ಜಮಖಂಡಿ, ಮುಧೋಳ, ಮತ್ತು ಬೆಳಗಾಂವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಬರುವ ರೈತರ ಶೇಕಡಾ ೮೦% ಭೂಮಿ ಮುಳಗಡೆಯಾಗುವದರಿಂದ ಆ ಭಾಗದ ರೈತರು ಸರಕಾರ ಕೊಡಮಾಡುವ ಪರಿಹಾರ ಧನಕ್ಕೆ ಒಪ್ಪಿಗೆ ಸೂಚಿಸಿರುವದನ್ನು ನಾನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಮನಸ್ಸಾಗುತ್ತಿಲ್ಲ ಕಾರಣ ಮೂರು ಹಂತದ ಆರ್ಥಿಕ ವರ್ಷ ಪರಿಹಾರ ವಿತರಣೆ ಮಾಡುವಾಗ ಮೊದಲ ಹಂತದಲ್ಲಿ ಪಡೆಯುವ ರೈತನಿಗೆ ಸ್ವಲ್ಪ ಮಟ್ಟಿಗೆ ಲಾಭವಾದರೆ ಎರಡು ಮತ್ತು ಮೂರನೇ ಹಂತದಲ್ಲಿ ಪಡೆಯುವ ರೈತನಿಗೆ ಈ ಪರಿಹಾರ ಹಣದ ಜೊತೆಗೆ ಹೆಚ್ಚುವರಿಯಾಗಿ ಹಣ ಕೊಡುತ್ತೇವೆ ಎನ್ನುವ ಸ್ಪಷ್ಟೀಕರಣವಿಲ್ಲ ಆದ್ದರಿಂದ ಮುಖ್ಯಮಂತ್ರಿಗಳು ಸ್ವತಃ ಹಣಕಾಸು ಸಚಿವರಾಗಿರುವದರಿಂದ ಈ ಭಾಗದ ರೈತರಿಗೆ ನ್ಯಾಯ ದೊರಕಿಸಲು ತಾವು ತೆಗೆದುಕೊಂಡ ನಿರ್ಣಯದಂತೆ ನೀರಾವರಿ ಕ್ಷೇತ್ರಕ್ಕೆ ೪೦ ಲಕ್ಷ ರೂ, ಒಣ ಬೇಸಾಯಕ್ಕೆ ೩೦ ಲಕ್ಷ ರೂ ಪರಿಹಾರ ಹಣವನ್ನು ಏಕಕಾಲಕ್ಕೆ ವಿತರಣೆ ಮಾಡಬೇಕೇಂದು ಆಗ್ರಹಿಸಿದರು.
ಒಟ್ಟು ಈ ಯೋಜನೆಯಲ್ಲಿ ಹಿನ್ನೀರಿನಿಂದ ೭೫ ಸಾವಿರ ಎಕರೆ ಭೂಮಿ ಮುಳಗಡೆಯಾದರೆ ಕಾಲುವೆ ಕಾಮಗಾರಿಗಾಗಿ ಒಟ್ಟು ೫೫ ಸಾವಿರ ಎಕರೆ ಭೂಮಿಯನ್ನು ಸರಕಾರವು ವಶಪಡಿಸಿಕೊಳ್ಳುತ್ತಿದ್ದು ಮುಳಗಡೆ ಜಮೀನಿಗೆ ಒಂದು ನ್ಯಾಯ ಕಾಲುವೆಗಾಗಿ ಪಡೆಯುವ ಜಮೀನಿಗೆ ಇನ್ನೊಂದು ರೀತಿ ನ್ಯಾಯ ಮಾಡಿರುವದು ಅಂದರೆ ಒಣ ಬೇಸಾಯಕ್ಕೆ ೨೦ ಲಕ್ಷ , ನೀರಾವರಿಗೆ ೩೦ ಲಕ್ಷ ರೂ. ಪರಿಹಾರ ಕೊಡುವ ವ್ಯತ್ಯಾಸ ಮಾಡಿರುವದು ರೈತರಲ್ಲಿಯೇ ಭೇಧ ಭಾವ ತಂದಂತಾಗುವದಿಲ್ಲವೇ ಎಂದು ಪ್ರಶ್ನೆ ಮಾಡಿದ ಅವರು ಕಾಲುವೆ ಕಾಮಗಾರಿಗಾಗಿ ಜಮೀನು ಕೊಟ್ಟ ರೈತರಿಗೂ ಕೂಡ ಮುಳಗಡೆ ಪರಿಹಾರ ಧನದಂತೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಈಗಾಗಲೇ ನ್ಯಾಯಲಯದಲ್ಲಿ ದಾವೆ ಹೂಡಿರುವ ರೈತರು ತಮ್ಮ ದಾವೆಯನ್ನು ಹಿಂದಕ್ಕೆ ಪಡೆದಾಗ ಮಾತ್ರ ಸಚಿವ ಸಂಪುಟ ನಿರ್ಣಯದಂತೆ ಪರಿಹಾರ ಹಣ ಕೊಡಲಾಗುವದು ಎಂದು ಹೇಳಿರುವ ಸರಕಾರದ ಆದೇಶವನ್ನು ಸಭೆಯಲ್ಲಿ ಸೇರಿದ ರೈತರು ಖಂಡಿಸಿದರು ಅಲ್ಲದೆ ಹಲವಾರು ರೈತರು ನ್ಯಾಯಲಯಗಳಿಂದ ಈಗಾಗಲೇ ತಮ್ಮ ತಮ್ಮ ಜಮೀನುಗಳ ಪರಿಹಾರ ಧನ ಕೊಡಲು ಸರಕಾರಕ್ಕೆ ಸೂಚಿಸಿರುವ ಆದೇಶ ಪಡೆದವರು ಹೇಗೆ ಒಪ್ಪಲು ಸಾದ್ಯ ರೈತರಿಗೆ ಪರಿಹಾರ ಧನ ಕೊಡಲು ಒಪ್ಪಿದ್ದೇವೆ ಎನ್ನುವದು ಒಂದು ಕಡೆ ಇನ್ನೊಂದು ರೈತರಿಗೆ ಅಷ್ಟು ಸುಲಬವಾಗಿ ಪರಿಹಾರ ಹಣ ದೊರಕಬಾರದು ಎನ್ನುವ ದ್ವಂದ್ವ ನಿಲವು ತಾಳಿದ ಸರಕಾರಕ್ಕೆ ದಿಕ್ಕಾರ ಕೂಗಿದರು.
ಇದೇ ಸಂಧರ್ಭದಲ್ಲಿ ವಿಶ್ವಕರ್ಮ ಜಯಂತಿಯನ್ನು ಹಾಗೂ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಹುಟ್ಟು ಹಬ್ಬವನ್ನು ರೈತರು ರಾಜಕೀಯ ಮುಖಂಡರು ಸೇರಿ ಸ್ವಚ್ಚತಾ ಆಭಿಯಾನ ಮಾಡುವದರ ಮೂಲಕ ಹಾಗೂ ೭೫ ಜನ ರಕ್ತದಾನ ಮಾಡುವ ಮೂಲಕ ಆಚರಣೆ ಮಾಡಿದರು.
ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು, ಪ್ರಭುಸ್ವಾಮಿ ಹಿರೇಮಠ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಿದ್ದಣ್ಣ ದೇಸಾಯಿ, ಹಣಮಂತ ಚೋಳಪ್ಪಗೋಳ, ಸಂಗಣಗೌಡ ಚಿಕ್ಕೊಂಡ, ಶಿವಾನಂದ ಅವಟಿ, ಶಿವನಗೌಡ ಪಾಟೀಲ, ಎಸ್.ಎಸ್. ಗೌರಿ, ನಾಗಣ್ಣ ದೇಸಾಯಿ, ಚಂದ್ರಶೇಖರಯ್ಯ ಗಣಕುಮಾರ, ಬಸವರಾಜ ಹೂಗಾರ, ಚಿನ್ನಪ್ಪ ಗಿಡ್ಡಪ್ಪಗೋಳ, ಕಲ್ಲಪ್ಪ ಸೊನ್ನದ, ಮಲ್ಲಪ್ಪ ಗಣಿ, ಸೇರಿದಂತೆ ಅನೇಕ ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

