ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ಕಣ್ಣಿನ ತಪಾಸಣೆ ಮಾಡಿ ದೃಷ್ಟಿ ದೋಷ ಇರುವ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸುವ ಕಾರ್ಯ ಶ್ಲಾಘನೀಯವಾದುದು ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
ತಾಲ್ಲೂಕಿನ ನಾಗಠಾಣ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ ಕಂಪನಿ ಬೆಂಗಳೂರು, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ತಾಲ್ಲೂಕಿನ ಸರಕಾರಿ, ಅನುದಾನಿತ ಶಾಲೆಗಳ ಒಟ್ಟು 56,000 ಸಾವಿರ ಮಕ್ಕಳಿಗೆ ಶಾಲೆಗೆ ಹೋಗಿ ಕಣ್ಣಿನ ತಪಾಸಣೆ ಮಾಡಿ ಅದರಲ್ಲಿ 1038 ಮಕ್ಕಳಿಗೆ ಉಚ್ಚ ಗುಣಮಟ್ಟದ ಕನ್ನಡಕಗಳನ್ನು ವಿತರಿಸುವದು. 768 ಮಕ್ಕಳಿಗೆ ಶಸ್ತ್ರ ಚಿಕಿತ್ಸೆಗಾಗಿ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇಲ್ಲಿಗೆ ಸಿಪಾರಸ್ಸು ಆಗಿದ್ದು, ಅದರಲ್ಲಿ ಈಗಾಗಲೆ 94 ಮಕ್ಕಳು ಉಚಿತ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಇನ್ನುಳಿದ ಮಕ್ಕಳ ಶಸ್ತ್ರ ಚಿಕಿತ್ಸೆ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಹೇಳಿದರು.
ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ.ಅರ್ಚನಾ ಕುಲಕರ್ಣಿ ಮಾತನಾಡಿ ಜಿಲ್ಲೆಯಲ್ಲಿ ನನ್ನ ಕಣ್ಣು ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಮಕ್ಕಳು ಸರಿಯಾದ ರೀತಿಯಲ್ಲಿ ಕ್ರಮಬದ್ಧವಾಗಿ ಬಳಸಿದರೆ ಮಕ್ಕಳ ಕಲಿಕೆಗೆ ಸಹಕಾರಿ ಆಗುವದು ಹಾಗೂ ಅರೋಗ್ಯ ಸಮಸ್ಯೆ ಕಡಿಮೆ ಆಗುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ. ಮೋಸಲಗಿ ಮಾತನಾಡಿ ಜುಲೈ 2024 ರಿಂದ ಇಲ್ಲಿಯವರೆಗೆ ಯಶಸ್ವಿಯಾಗಿ ಯೋಜನೆ ನಡೆದಿದ್ದು ತಪಾಸಣೆ ಮಾಡಿ ಸಮಸ್ಯೆ ಇರುವ ಮಕ್ಕಳಿಗೆ ಕನ್ನಡಕವನ್ನು ವಿತರಣೆ ಮಾಡಿರುವರು. ಇದರಿಂದ ಮಕ್ಕಳ ಕಲಿಕೆಗೆ, ಫಲಿತಾಂಶ ಸುಧಾರಣೆಗೆ ಬಹಳ ಸಹಾಯವಾಗಿದೆ. ಬಹಳ ಸಮಸ್ಯೆ ಇರುವ ಮಕ್ಕಳಿಗೆ ಉಚಿತವಾಗಿ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆಗೆ ಕಳಿಸಿ ಉಚಿತ ಶಸ್ತ್ರ ಚಿಕಿತ್ಸೆ ಕೊಡಿಸಲಾಗುವದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಆಸ್ಪತ್ರೆಯ ಆಡಳಿತಾಧಿಕಾರಿ ಪರಮೇಶ್ವರ ರೆಡ್ಡಿ ಮಾತನಾಡಿ ಮಾತನಾಡಿ ಒಳ್ಳೆಯ ಗುಣಮಟ್ಟದ ಕನ್ನಡಕ ನೀಡಿದ್ದೇವೆ. ಸರಿಯಾದ ರೀತಿಯಲ್ಲಿ ಯಾವುದೆ ಮುಜುಗುರಕ್ಕೆ ಒಳಗಾಗದೆ ದಿನಾಲು ಬಳಸಿರಿ. ಜಿಲ್ಲೆಯಲ್ಲಿ 3,25,000 ಮಕ್ಕಳಲ್ಲಿ 9775 ಮಕ್ಕಳಿಗೆ ಕನ್ನಡಕ ವಿತರಿಸುವ ಕಾರ್ಯ ನಡೆದಿದೆ. ಈಗಾಗಲೆ ಜಿಲ್ಲೆಯಲ್ಲಿ 462 ಮಕ್ಕಳು ಬೆಂಗಳೂರಿಗೆ ಬಂದು ಉಚಿತ ಶಸ್ತ್ರ ಚಿಕಿತ್ಸೆ ಪಡೆದಿರುವರು ಪ್ರತಿ ಮಕ್ಕಳಿಗೆ ₹ 1000ಪ್ರೋತ್ಸಾಹ ಧನ ನೀಡಲಾಗಿದೆ ಎಂದರು.
ಪ್ರಾಚಾರ್ಯ ಡಿ.ಎಂ.ಚಲವಾದಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಉಪಯುಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿಐಇಆರ್ಟಿ ಎಸ್. ಬಿ. ಬಿರಾದಾರ, ಪ್ರಭು ಬಿರಾದಾರ, ಬಿ. ಎಂ. ಕದಂ, ಚಂದ್ರಪ್ಪ, ಅನೀಲ, ವಸಂತ ಚವಾಣ್, ಜಿ.ಟಿ.ಕಾಗವಾಡ, ಸುಭಾಸ್ ರಾಠೋಡ್, ಹುಸೇನ್ ಭಾಷಾ ಹೊನ್ನುಟಗಿ, ಎಸ್.ಜಿ. ಮಳ್ಳಿ,ಎಸ್. ಎಸ್. ಪಟ್ಟಣಶೆಟ್ಟಿ, ಎಸ್. ಎಸ್. ಆಯಟ್ಟಿ ಇದ್ದರು.

