ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮೀಣ ಭಾಗಗಳಲ್ಲಿ ನಡೆಯುವ ಪ್ರತಿಯೊಂದು ಕ್ರೀಢೆಗಳಿಗೆ ಸಾಂಪ್ರದಾಯಿಕ ಹಿನ್ನೆಲೆಯಿದ್ದು ಅದು ರೈತರ ಜನಜೀವನಕ್ಕೆ ಸ್ಪೂರ್ತಿಯಾಗಿದೆ ಎಂದು ಪ್ರಭುಲಿಂಗೇಶ್ವರ ಅಂತರಾಷ್ಟ್ರೀಯ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವಿದ್ಯಾಧರ ಸವದಿ ಹೇಳಿದರು.
ಗ್ರಾಮದ ಆರಾದ್ಯದೇವತೆ ಶ್ರೀ ಎಲ್ಲಮ್ಮಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ದಾ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಭೂತಾಯಿಯನ್ನು ನಂಬಿರುವ ರೈತರು ಅದಕ್ಕೆ ಉಳುಮೆ ಮಾಡುವ ಎತ್ತುಗಳಿಗೆ ಬಸವಣ್ಣ ದೇವರೆಂದು ಪೂಜಿಸುತಿದ್ದು ಅವುಗಳ ಸಾಮರ್ಥ್ಯ ಮತ್ತು ಅವುಗಳನ್ನು ಮೇಯಿಸುವ ರೈತರ ಸಾಮರ್ಥ್ಯ ಪರೀಕ್ಷಿಸಲು ತೆರಬಂಡಿ, ಕುದುರೆ ಚಕ್ಕಡಿ ಬಂಡಿ ಓಡಿಸುವ ಸ್ಪರ್ದೆ ಸೇರಿದಂತೆ ಹಲವಾರು ಸ್ಪರ್ದೆಗಳನ್ನು ಹಮ್ಮಿಕೊಂಳ್ಳುವ ಸಾಂಪ್ರದಾಯಿಕ ಹಿನ್ನೆಲೆಯಿದ್ದು ಇಂದಿನ ಆಧುನಿಕ ಯುಗದಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಅವು ಜೀವಂತವಾಗಿರುವುದು ನಿದರ್ಶನ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ ಶ್ರೀ ಜನಾರ್ಧನ ಮಹಾರಾಜರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಶ್ರೀ ಎಲ್ಲಮ್ಮದೇವಿ ಸೇವಾ ಸಮೀತಿಯ ಕಳ್ಳೆಪ್ಪ ನಡುವಿನಮನಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಂತೇಶ ಜಾಲಿಕಟ್ಟಿ, ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯಣ್ಣವರ, ನಾಗಪ್ಪ ಆಲಕನೂರ, ಸಿದ್ಲಿಂಗ ಹಳೆಮನಿ ವೇದಿಕೆಯಲ್ಲಿದ್ದರು.
ಬುಧವಾರ ಮುಂಜಾನೆ ಶ್ರೀ ಎಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಗೊಂಡ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕುದುರೆ ಓಟದ ಸ್ಪರ್ದೆ ಹಾಗೂ ರಾಜ್ಯ ಮಟ್ಟದ ತೆರಬಂಡಿ ಸ್ಪರ್ದೆಗಳು ಹಮ್ಮಿಕೊಳ್ಳಲಾಗಿದ್ದು ಅವು ಗುರುವಾರದವರೆಗೂ ಮುಂದುವರೆಯಲಿದ್ದು.
ಶುಕ್ರವಾರ ಮುಂಜಾನೆ ೯ ಘಂ.ಗೆ ಕರ್ನಾಟಕ ಮಹಾರಾಷ್ಟ್ರದ ಪ್ರಸಿದ್ದಡೊಳ್ಳಿನ ಮೇಳಗಳಾದ ಗಿರಮಲ್ಲ ಮಾಸ್ತರ ನೇತ್ರತ್ವದ ಶ್ರೀ ಬೀರಲಿಂಗೇಶ್ವರ ಗಾಯನ ಸಂಘ ಶಿರಾಢೋಣ ಹಾಗೂ ತುಕಾರಾಮ ಮಹಾರಾಜರ ನೇತ್ರತ್ವದ ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಹಾಡಿನ ಸಂಘ ಲಮಾನಟ್ಟಿ ಯವರಿಂದ ಮುಕಾಬಲಾ ಡೊಳ್ಳಿನ ಹಾಡುಗಳು ನಡೆಯಲಿದೆ ನಂತರ ದೇವಿಯ ಉಡಿ ತುಂಬುವ ಹಾಗೂ ಮಹಾಪ್ರಸಾದ ವಿತರಣೆ ಮೂಲಕ ಜಾತ್ರಾ ಕಾರ್ಯಕ್ರಮಗಳು ಮಂಗಲಗೊಳ್ಳಲಿದ್ದು ಸುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಎಲ್ಲಮ್ಮಾದೇವಿ ಸೇವಾ ಸಮೀತಿ ವಿನಂತಿಸಿದೆ.

