ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರ, ಜಿಲ್ಲಾಡಳಿತ, ತಾಲೂಕಾಡಳಿತ ಎಲ್ಲರೂ ಸೇರಿ ಸಂತ್ರಸ್ತರಿಗೆ ಶೀಘ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದು, ಇದು ಅತೀ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರುವ ಭರವಸೆ ನಮ್ಮೆಲ್ಲರಿಗಿದ್ದು, ಅದೇ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಶೀಘ್ರ ಪಲಾನುಭವಿಗಳ ಮೊಗದಲ್ಲಿ ನಗು ತರುವ ಕಾರ್ಯ ಮಾಡುತ್ತೇವೆ ಎಂದು ದಸಂಸ ಸಮಿತಿ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೆಲ್ಲವನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶಾಸಕರ ಪ್ರಯತ್ನಕ್ಕೆ ತಣ್ಣೀರೆರೆಚುವ ಹಾಗೂ ಮುಗ್ಧ ಜನತೆಯ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ವಿಷಾದಕರ. ಇದ್ಯಾವುದಕ್ಕೂ ಕಿವಿಗೊಡದೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳತ್ತ ನೋಟ ಹರಿಸುವುದುದ ಸೂಕ್ತ ಎಂದು ಕಿವಿಮಾತು ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ಶಾಸಕರು ಸಂತ್ರಸ್ತರಿಗೆ ನಿಯೋಜಿತ ಜಾಗೆಯಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಲ್ಲದೇ ಮನೆ ಕಟ್ಟಿಕೊಳ್ಳಲು ಸರಕಾರದಿಂದ ಸಿಗುವ ಎಲ್ಲ ರೀತಿಯ ಹಣಕಾಸಿನ ಸಹಾಯ ಅಲ್ಲದೇ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕೊಡಿಸುವುದರ ಜೊತೆಗೆ ಮನಗೂಳಿ ಪ್ರತಿಷ್ಠಾನದಿಂದ ಪ್ರತಿ ಕುಟುಂಬಕ್ಕೆ ತಲಾ ೨೫ಸಾವಿರ ಸಹಾಯಧನ ಕೊಡುವ ಭರವಸೆಯನ್ನೂ ನೀಡಿದ್ದಾರೆ. ಇಷ್ಟೆಲ್ಲಾ ಆದರೂ ವಿರೋಧ ಪಕ್ಷದವರು ಹಾಗೂ ಕೆಲ ಹೋರಾಟಗಾರರು ಸತ್ಯಾಂಶವನ್ನು ಮರೆಮಾಚಿ ದರಣಿ ನಿರತ ಪಲಾನುಭವಿಗಳ ದಾರಿ ತಪ್ಪಿಸುವ ಉದ್ದೇಶದಿಂದ ಬೇರೆ ಬೇರೆ ಹೇಳಿಕೆಗಳನ್ನು ಕೊಡುತ್ತಿರುವುದು ನೋವು ತಂದಿದೆ ಎಂದರು.
ಈ ವೇಳೆ ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಶಿವನಗೌಡ ಬಿರಾದಾರ, ಎಂ.ಎ.ಖತೀಬ, ಅಂಬರೀಷ ಚೌಗಲೆ ಸೇರಿದಂತೆ ಅನೇಕರು ಇದ್ದರು.
“ರಾಂಪೂರ ರಸ್ತೆಯಲ್ಲಿರುವ ಪುರಸಭೆಯ ಜಮೀನು ಇನ್ನು ಕೃಷಿಯೇತರ ಜಮೀನಾಗಿ ಮಾರ್ಪಾಡಾಗಿಯೇ ಇರುವುದರಿಂದ ಅಲ್ಲಿ ಸಂತ್ರಸ್ಥರಿಗೆ ಸೂರು ಒದಗಿಸಿಕೊಡಲು ಕಾಲಾವಕಾಶ ಬೇಕಾಗುವುದರಿಂದ ಪಟ್ಟಣದ ಹೊರ ವಲಯದಲ್ಲಿರುವ ಅಂತರಗಂಗಿ ರಸ್ತೆಗೆ ಹೊಂದಿಕೊಂಡಿರುವ ಪುರಸಭೆ ಜಾಗೆಯಲ್ಲಿ ತ್ವರಿತವಾಗಿ ವಸತಿ ಕಲ್ಪಿಸಿಕೊಡಲು ಪುರಸಭೆ ಹಾಗೂ ಶಾಸಕರು ನಿರ್ಧಾರ ಮಾಡಿದ್ದರು.”
– ಸುರೇಶ ಪೂಜಾರಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

