ಚಡಚಣ ಪಟ್ಟಣದಲ್ಲಿ ನಡೆದ ಎಸ್‌ಬಿಐ ಬ್ಯಾಂಕ್ ದರೋಡೆ | ರೂ.೨೧ ಕೋಟಿ ಮೌಲ್ಯದ ೨೦ ಕೆ.ಜಿ ಚಿನ್ನಾಭರಣ, ರೂ.೧.೫ ಕೋಟಿ ನಗದು ದೋಚಿದ ಬಂದೂಕು ಧಾರಿ ಗ್ಯಾಂಗ್ | ಎಸ್ಪಿ ಲಕ್ಷಣ ನಿಂಬರಗಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಾರಾಷ್ಟ್ರದ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕ ರಾಜ್ಯದ ಕೊನೆಯ ಪಟ್ಟಣ ಮತ್ತು ಭೀಮಾತೀರ ಎಂದು ಕುಖ್ಯಾತಿ ಪಡೆದಿರುವ ಚಡಚಣ ತಾಲೂಕಿನಲ್ಲಿ ರಾಜ್ಯಾದ್ಯಂತ ಬೆಚ್ಚಿ ಬೀಳಿಸುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳ ಸಾಲಿಗೆ ಇದೀಗ ಚಡಚಣ ಪಟ್ಟಣದ ಎಸ್.ಬಿ.ಐ. ಶಾಖೆ ಕೂಡ ಸೇರ್ಪಡೆಯಾಗಿದೆ.
ವಿಜಯಪುರ ಜಿಲ್ಲೆಯ ಮನಗೂಳಿಯ ಬ್ಯಾಂಕ್ ಲೂಟಿ ಮಾಸುವ ಮುನ್ನವೆ ಸಿನಿಮಿಯ ಮಾದರಿಯಲ್ಲಿ ಮಂಗಳವಾರ ಸಂಜೆ ೬.೩೦ರಿಂದ ೭.೩೦ರ ನಡುವೆ ಭೀಮಾತೀರದ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ಧಿಡೀರ್ ದರೋಡೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಈ ಕುರಿತು ಬುದವಾರ ಎಸ್.ಪಿ ಲಕ್ಷಣ ನಿಂಬರಗಿ ಪತ್ರಿಕಾಗೋಷ್ಟೀಯಲ್ಲಿ ಮಾತನಾಡಿ, ಮಂಗಳವಾರ ಚಡಚಣ ಪಟ್ಟಣದ ಎಸ್.ಬಿ.ಐ.ಬ್ಯಾಂಕ್‌ನಲ್ಲಿ ಸಂಜೆ ೬.೩೦ ರಿಂದ ೭.೩೦ ರ ಸಮಯಕ್ಕೆ ಬ್ಯಾಂಕ್‌ಗೆ ಪ್ರವೇಶಿಸಿದ್ದ ೫ ಮಂದಿ ಮುಸುಕುಧಾರಿ ದರೋಡೆಕೋರರು, ಸಿಬ್ಬಂದಿ ಹಾಗೂ ಎಟಿಎಂ ಸೆಕ್ಯುರಿಟಿ ಗಾರ್ಡ್ ರನ್ನು ಪಿಸ್ತೂಲ್ ತೋರಿಸಿ ಬೆದರಿಸಿ, ಕೈ-ಕಾಲು ಕಟ್ಟಿ ಒಂದು ಕೊಠಡಿಯಲ್ಲಿ ಕೂಡಿಹಾಕಿ, ಸುಮಾರು ೨೦ ಕೆ.ಜಿ ಚಿನ್ನಾಭರಣ (೨೧ ಕೋಟಿ ಮೌಲ್ಯ) ಹಾಗೂ ರೂ.೧.೫ ಕೋಟಿ ನಗದು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಿದರು.
ಎಷ್ಟು ಲೂಟಿ ಮಾಡಿದ್ದಾರೆ ಎನ್ನುವುದು ಪೋಲಿಸ್ ತನಿಖೆಯಿಂದ ಗೊತ್ತಾಗುತ್ತದೆ. ಬ್ಯಾಂಕ ಸಿಬ್ಬಂಧಿ ನಿರ್ಧಿಷ್ಠ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಕಳೆದ ೩ ತಿಂಗಳಿಂದ ಬ್ಯಾಂಕ್‌ನಲ್ಲಿ ಶಾಶ್ವತ ಸೆಕ್ಯುರಿಟಿ ಗಾರ್ಡ್ ಇರಲಿಲ್ಲ. ದರೋಡೆಕೋರರು ಈ ಮೊದಲು ಮುಖಕ್ಕೆ ಮಾಸ್ಕ ಹಾಕಿಕೊಂಡು ಅನೇಕ ಬಾರಿ ಬ್ಯಾಂಕ್ ಸಿಬ್ಬಂದಿಯ ಚಲನ ವಲನ ನೋಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ, ಬ್ಯಾಂಕಿಗೆ ದರೋಡೆ ವೇಳೆ ಗುಂಡು ಹಾರಿಸಿದ ಶಂಕೆ ವ್ಯಕ್ತವಾಗಿದ್ದು, ಬ್ಯಾಂಕ್ ಒಳಗೆ ಬುಲೆಟ್ ಕ್ಯಾಪ್ ಪತ್ತೆಯಾಗಿದೆ. ಆದರೆ ಗುಂಡಿನಿಂದ ಯಾವುದೆ ಪ್ರಾಣಪಾಯವಾಗಿಲ್ಲ ಎಂದರು.
ಸ್ಥಳೀಯ ಗ್ರಾಹಕ ಶ್ರೀಶೈಲ್ ಎಂಬಾತನು ಎಟಿಎಮ್ ನಲ್ಲಿ ಹಣ ಬಾರದ್ದಕ್ಕೆ ಸಿಬ್ಬಂದಿ ಜೊತೆ ಮಾತಾಡುವ ಸಮಯದಲ್ಲಿ ದರೋಡೆಕೋರರು ಬಂದು ಆತನ ಮೊಬೈಲ್ ಕಸಿದುಕೊಳ್ಳಲ್ಪಟ್ಟಿದ್ದರೂ ಬಳಿಕ ಮರಳಿ ನೀಡಲಾಗಿದೆ ಎಂದರು.
ದರೋಡೆಕೋರರು ಬಳಸಿದ ಇಕೋ ವಾಹನ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಪತ್ತೆಯಾಗಿದೆ. ಅದರಲ್ಲಿ ಸ್ವಲ್ಪ ನಗದು ಹಾಗೂ ಚಿನ್ನಾಭರಣ ಪ್ಯಾಕೆಟ್‌ಗಳು ದೊರೆತಿವೆ ಎಂದರು.
ಘಟನೆ ಕುರಿತು ೮ ತನಿಖಾ ತಂಡಗಳನ್ನು ರಚಿಸಲಾಗಿದೆ ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಪೊಲೀಸರು ಜಾಲ ಬೀಸಿದ್ದು ಶೀಘ್ರದಲ್ಲೇ ಆರೋಪಿಗಳ ಪತ್ತೆ ಮಾಡಲಾಗುವುದು, ಸಾರ್ವಜನಿಕರು ಗಾಬರಿಯಾಗಬಾರದು ಎಂದು ವಿಜಯಪುರ ಎಸ್‌ಪಿ ಲಕ್ಷಣ ನಿಂಬರಗಿ ಪತ್ರಿಕಾಗೋಷ್ಟಿಯಲ್ಲಿ ಭರವಸೆ ನೀಡಿದರು.
ಸದ್ಯ ತನಿಖೆ ಮುಂದುವರಿದಿದ್ದು, ಕಳ್ಳತನವಾದ ನಗದು ಎಷ್ಟು? ಕೃತ್ಯ ಹೇಗಾಯಿತು? ಎಂಬಿತ್ಯಾದಿ ವಿವರ ತನಿಖೆ ಬಳಿಕವೇ ಗೊತ್ತಾಗಲಿದೆ. ಮಾಧ್ಯಮದವರು ಅನಾವಶ್ಯಕ ಬಿಂಬಿಸಿ ವರದಿ ಅಥವಾ ವಿಡಿಯೋ ಹರಿಬಿಡಬಾರದು ಎಂದರು.

ಎಸ್.ಬಿ.ಐ ಗ್ರಾಹಕರ ಪರದಾಟ
ಘಟನೆಯ ಬಳಿಕ ಬ್ಯಾಂಕ್ ಮುಂದೇನು ನಡೆಯುತ್ತದೆ ಎಂಬುದರ ಬಗ್ಗೆ ಆತಂಕಗೊಂಡ ಗ್ರಾಹಕರು, ಠೇವಣಿದಾರರು, ಚಿನ್ನಾಭರಣ ಒತ್ತೆಯಿಟ್ಟು ಹಣಪಡೆದವರು ಹಾಗೂ ಲಾಕರ್ ಹೊಂದಿದವರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ತಮ್ಮ ಚಿನ್ನಾಭರಣ ಸುರಕ್ಷಿತವಿದೆಯೇ ಎಂದು ವಿಚಾರಿಸುತ್ತಿದ್ದರು. ಆದರೆ ಪೋಲೀಸರ ಬಿಗಿ ಬಂದೋಬಸ್ತದಿಂದಾಗಿ ಬ್ಯಾಂಕ್ ಅಧಿಕಾರಿಗಳನ್ನು ಭೇಟಿಮಾಡಲು ಸಾಧ್ಯವಾಗಲಿಲ್ಲ. ಅಧಿಕಾರಿಗಳು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡದೆ ಮೌನ ವಹಿಸಿದರು. ಇದರಿಂದ ಗ್ರಾಹಕರಲ್ಲಿ ಅಸಮಾಧಾನ ವ್ಯಕ್ತವಾಯಿತು.

