ಸರದಿ ಉಪವಾಸ ಸತ್ಯಾಗ್ರಹದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅಸಮಾಧಾನ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸರಕಾರ ಕೈಗಾರಿಕಾ ವಸಾಹಾತು ಪ್ರದೇಶಕ್ಕೆ ವಶಪಡಿಸಿಕೊಳ್ಳುವ ಜಮೀನುಗಳಿಗೆ ರೈತರ ಬೇಡಿಕೆಯಂತೆ ೫೦ ಲಕ್ಷ, ಕೋಟಿವರೆಗೆ ಪರಿಹಾರ ಧನ ಕೊಟ್ಟ ಉದಾಹರಣೆಗಳು ಸಾಕಷ್ಟಿದ್ದರೂ ಕೃಷ್ಣಾ ನದಿ ಹಿನ್ನೀರಿನ ಮುಳಗಡೆಯಾಗುವ ಜಮೀನುಗಳಿಗೆ ಪರಿಹಾರ ಧನ ಕೊಡುವಲ್ಲಿ ಏಕೆ ತಾರತಮ್ಯ ಮಾಡುತ್ತಿದೆ ಎನ್ನುವುದೇ ಈ ಭಾಗದ ರೈತರಿಗೆ ಇವತ್ತಿಗೂ ಪ್ರಶ್ನೆಯಾಗಿ ಉಳಿಯುವದಕ್ಕೆ ನಮ್ಮನ್ನಾಳುವ ಜನಪ್ರತಿನಿಧಿಗಳ ಬೇಜವಾಬ್ದಾರಿತನ ಕಾರಣವಾಗಿದೆ ಎಂದು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯ ಪ್ರಕಾಶ ಅಂತರಗೊಂಡ ಹೇಳಿದರು.
ಪಟ್ಟಣದ ಯುಕೆಪಿ ವೃತ್ತದ ಪ್ರವಾಸಿ ಮಂದಿರದ ಎದುರುಗಡೆ ಕೃಷ್ಣಾ ಮೇಲ್ದಂಡೆ ಯೋಜನೆಯ ೫೨೪ಮೀ ಎತ್ತರಿಸುವ ಅಡಿಯಲ್ಲಿ ಮುಳಗಡೆಯಾಗುವ ಜಮೀನುಗಳಿಗೆ ಯೋಗ್ಯ ಬೆಲೆ ಸಿಗಬೇಕೆಂದು ಆಗ್ರಹಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಹಮ್ಮಿಕೊಂಡ ಸರದಿ ಉಪವಾಸ ಸತ್ಯಾಗ್ರಹದ ೨ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವದರ ಜೊತೆಗೆ ಬೆಂಬಲ ನೀಡಿ ಮಾತನಾಡಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಇಂದಿನ ಸಚಿವ ಸಂಪುಟದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಮುಳಗಡೆಯಾಗುವ ರೈತರ ಜಮೀನುಗಳಿಗೆ ಕೃಷಿ ಭೂಮಿಗೆ ೪೦ ಲಕ್ಷ ರೂ. ಒಣ ಬೇಸಾಯ ಭುಮಿಗೆ ೩೦ ಲಕ್ಷ ರೂ. ನಿಗದಿ ಮಾಡಿ ನಿರ್ಣಯ ಕೈಕೊಂಡಿರುವದು ಅವೈಜ್ಞಾನಿಕ ದೃಷಿಕೋನದಿಂದ ಕೂಡಿದ್ದು ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಈ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದ ಅವರು ಇದಕ್ಕೆ ನಮ್ಮ ಸಹಮತವಿಲ್ಲ ನಮ್ಮ ಹೋರಾಟ ನಮ್ಮ ಬೇಡಿಕೆಯಂತೆ ನೀರಾವರಿ ಭೂಮಿಗೆ ಎಕರೆಗೆ ೫೫ ಲಕ್ಷರೂ, ಒಣಬೇಸಾಯಕ್ಕೆ ೪೫ ಲಕ್ಷ ರೂ. ಪರಿಹಾರ ಧನ ಘೋಷಣೆ ಮಾಡುವವರೆಗೂ ಬಿಡುವದಿಲ್ಲ ಎಂದರು.
ಮುಳಗಡೆಯ ಗ್ರಾಮಗಳಾದ ಹೊಳೆಹಂಗರಗಿ, ಜೈನಾಪೂರ, ಬೆಳ್ಳುಬ್ಬಿ, ಮಂಗಳೂರು, ದ್ಯಾವಾಪೂರ, ತಾಜಪುರ, ದೇವರಗೆಣ್ಣೂರ ಭಾಗಗಳಿಂದ ಬೈಕ್ ರ‍್ಯಾಲಿ ಮುಖಾಂತರ ನೂರಾರು ರೈತರು ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ೨ನೇ ದಿನದ ಸರದಿ ಉಪವಾ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು, ಜೈನಾಪೂರದ ಪ್ರಭುಸ್ವಾಮಿ ಹಿರೇಮಠ, ಸಿದ್ದು ದೇಸಾಯಿ, ಚಿನ್ನಪ್ಪ ಗಿಡ್ಡಪ್ಪಗೋಳ, ಸಗರೆಪ್ಪ ಮುರನಾಳ, ಡೋಂಗ್ರಸಾಬ ಗಿರಗಾಂವಿ, ಇಸ್ಮಾಯಿಲ್‌ಸಾಬ ತಹಶೀಲ್ದಾರ, ನಂದಬಸಪ್ಪ ಚೌದರಿ, ಸಂಚಾಲಕರಾದ ಜಗದೀಶ ಸುಣಗದ, ಚಂದ್ರಶೇಖರ ಬೆಳ್ಳುಬ್ಬಿ, ರಾಮಣ್ಣ ಬಾಟಿ, ಅನೇಕ ರೈತ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

