ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಯಾವುದೇ ಅಪರಾಧ ಕೃತ್ಯಗಳು ಜರುಗಿದರೂ ೨೪ ಗಂಟೆಗಳ ಅವಧಿಯಲ್ಲಿ ಅಪಾರಾಧಿಗಳನ್ನು ಪತ್ತೆ ಹಚ್ಚುವ ಈ ತಾಂತ್ರಿಕ ಯುಗದಲ್ಲಿ ತಿಂಗಳುಗಳೇ ಗತಿಸಿದರೂ ಯಾವೊಬ್ಬ ಅಪರಾಧಿಯನ್ನು ತಂದು ಕಟಕಟೆಯಲ್ಲಿ ನಿಲ್ಲಿಸದಿರುವುದು ಪೊಲೀಸರ ಕಾರ್ಯದಕ್ಷತೆಯ ಮೇಲೆ ಸಂಶಯ ವ್ಯಕ್ತವಾಗುತ್ತದೆ ಎಂದು ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಬನ್ನೆಟ್ಟಿ ಗ್ರಾಮದಲ್ಲಿ ಮಹಾದೇವಪ್ಪ ಪೂಜಾರಿ ಎಂಬ ದಲಿತ ವ್ಯಕ್ತಿಯ ಕೊಲೆಯಾಗಿ ನಾಲ್ಕು ತಿಂಗಳಾಗುತ್ತಾ ಬಂದರೂ ಕೊಲೆಗಾರರನ್ನು ಬಂದಿಸದೇ ಇರುವುದು ಪೊಲೀಸ್ ಇಲಾಖೆಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ಇಲಾಖೆ ಈ ರೀತಿ ನಿರ್ಲಿಪ್ತತೆ ತೋರುತ್ತಿರುವುದು ಯಾವ ಕಾರಣಕ್ಕೆ? ಇಲ್ಲಿ ಕೊಲೆಗಾರನ ರಕ್ಷಣೆ ಮಾಡಲಾಗುತ್ತಿದೆಯೇ ಅಥವಾ ಯಾವುದೋ ಆಮಿಷಕ್ಕೊಳಗಾಗಿ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದಯೇ ಎಂಬುದು ಮೊದಲು ದೃಢವಾಗಬೇಕು. ತನಿಖೆಯಲ್ಲಿನ ಈ ಎಲ್ಲ ವೈಫಲ್ಯಗಳನ್ನು ಖಂಡಿಸಿ ಬರುವ ಸೆ.೧೯ರಂದು ಬನ್ನೆಟ್ಟಿ ಗ್ರಾಮದಿಂದ ಕಾಲ್ನಡಿಗೆಯ ಜಾಥಾ ಪ್ರಾರಂಭಿಸಿ ಬ್ಯಾಕೋಡ ಮತ್ತು ಸಿಂದಗಿ ಮಾರ್ಗ ಮಧ್ಯದ ಜಲಧಾರೆ ಕಾಮಗಾರಿಯ ಸ್ಥಳದಲ್ಲಿ ವಾಸ್ಥವ್ಯ ಹೂಡಲಾಗುವುದು. ಸೆ.೨೦ರಂದು ಸಿಂದಗಿ ನಗರಕ್ಕೆ ಆಗಮಿಸಿ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಠಾವಧಿ ಸತ್ಯಾಗ್ರಹ ನಡೆಸಲಾಗುವುದು. ಪ್ರತಿಭಟನೆ ಪ್ರಾರಂಭ ಮಾಡುವ ಪೂರ್ವದಲ್ಲಿಯೇ ಅಪರಾಧಿಯನ್ನು ಬಂದಿಸುವ ಕಾರ್ಯ ಇಲಾಖೆ ಮಾಡಬೇಕು. ಪೊಲೀಸ್ ವರಿಷ್ಠಾಧಿಕಾರಿಯವರೇ ಸ್ಥಳಕ್ಕೆ ಬಂದು ಅಪರಾಧಿಗಳನ್ನು ಬಂಧಿಸುವ ಭರವಸೆ ಕೊಡಬೇಕು ಎಂದರು.
ಈ ವೇಳೆ ದಸಂಸ ಸಮಿತಿಯ ಚಂದ್ರಕಾಂತ ಸಿಂಗೆ, ಶರಣು ಶಿಂಧೆ, ಶ್ರೀನಿವಾಸ ಓಲೇಕಾರ, ಪರಶುರಾಮ ದಿಂಡವಾರ ಮಾತನಾಡಿ, ಮೃತ ವ್ಯಕ್ತಿ ಗಂಗರೆಡ್ಡಿ ಎನ್ನುವವರ ಜಮೀನನ್ನು ಸಾಗುವಳಿ ಮಾಡುತ್ತಿದ್ದ. ಅವರ ಹೊಲದ ವಿಚಾರವಾಗಿ ಇಬ್ಬರ ನಡುವೆ ತಕರಾರುಗಳಿದ್ದವು. ಇದೇ ತಕರಾರು ಮಹಾದೇವಪ್ಪನ ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂಬ ಬಲವಾದ ಶಂಕೆಯ ಮೇಲೆ ಪ್ರಕರಣ ದಾಖಲಿಸಿದ್ದರೂ ಇದುವರೆಗೂ ಯಾರನ್ನು ಬಂಧಿಸಲಾಗಿಲ್ಲ. ಮೃತ ವ್ಯಕ್ತಿಯ ಚಪ್ಪಲಿಗಳು ಅದೇ ಹೊಲದಲಿದ್ದು, ಮೂರು ದಿನದ ನಂತರ ಕೊಳೆತ ಸ್ಥಿತಿಯಲ್ಲಿ ಸಿಕ್ಕಾಗ ಗಂಗರೆಡ್ಡಿ ಕುಟುಂಬದವರ ಹೇಳಿಕೆಗಳು ದ್ವಂದ್ವ ರೀತಿಯಲ್ಲಿ ಸಂಶಯ ಮೂಡಿಸುವಂತಿದ್ದವು. ವೈದ್ಯಕೀಯ ವರದಿಯಲ್ಲಿಯೂ ಕೊಲೆ ಎಂದೇ ಸಾಬೀತಾಗಿದೆ. ಇವೆಲ್ಲವನ್ನೂ ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿಕೊಟ್ಟರೂ ಕನಿಷ್ಠ ಯಾರೊಬ್ಬರನ್ನು ಸಂಶಯಾಸ್ಪದವಾಗಿ ಬಂಧಿಸಿ ತನಿಖೆಗೆ ಒಳಪಡಿಸದಿರುವುದು ಇಲಾಖೆಯ ವೈಫಲ್ಯತೆಯನ್ನು ಮತ್ತಷ್ಟು ಪ್ರಭಲಗೊಳಿಸುವುದಲ್ಲದೇ ಇಲಾಖೆಯ ನಡೆ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಕೂಡಲೇ ಅಧಿಕಾರಿಗಳು ಅಪರಾಧಿಗಳನ್ನು ಬಂಧಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರವಿ ತಳಕೇರಿ, ಮತ್ತು ಸುಲ್ಪಿ, ಡಿ.ಕೆ.ಬಗಲೂರ, ಗುರು ಬಿದರಿ, ಪ್ರಕಾಶ ಗುಡಿಮನಿ ಸೇರಿದಂತೆ ದಲಿತ ಸಮಾಜ ಬಾಂಧವರು ಹಾಗೂ ಬನ್ನೆಟ್ಟಿ ಗ್ರಾಮಸ್ಥರು ಇದ್ದರು.