ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತ ಲೋಕದ ದಿಗ್ಗಜರು. ಸಾವಿರಾರು ಅಂಧ ಮಕ್ಕಳ ಬಾಳಿಗೆ ನಂದಾದೀಪವಾಗಿ ಸಂಗೀತ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಗುರು ಕುಮಾರೇಶ್ವರ ಎಂಬ ಕೃಪಾ ಪೋಷಿತ ನಾಟ್ಯ ಸಂಘವನ್ನು ಕಟ್ಟಿ, ಅಂಗವಿಕಲ, ಅನಾಥ, ಬಡ ಮತ್ತು ಅಂಧ ಮಕ್ಕಳಿಗೆ ಉಚಿತ ಆಹಾರ, ಆಶ್ರಯ, ಶಿಕ್ಷಣವನ್ನು ಒದಗಿಸುವಲ್ಲಿ ಶ್ರಮಿಸಿದವರು ಎಂದು ನಿವೃತ್ತ ಸೇನಾನಿ ಭರಮಣ್ಣ ಕಡಕೋಳ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಸೇನಾ ನಗರದ ಶಿವಾಲಯ ದೇವಸ್ಥಾನದಲ್ಲಿ ಗಾನ ತರಂಗ ಸಂಗೀತ ಶಾಲೆಯ ಸಹಯೋಗದಲ್ಲಿ ಜರುಗಿದ ಪಂಡಿತ ಪುಟ್ಟರಾಜ ಗವಾಯಿಗಳ ೧೫ ನೇಯ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಗಾನ ತರಂಗ ಸಂಗೀತ ಶಾಲೆಯ ಶಿಕ್ಷಕ ಶ್ರೀಶೈಲ ಬೀಳೂರ ಮಾತನಾಡುತ್ತಾ, ಗದುಗಿನ ವೀರೇಶ್ವರ ಪುಣ್ಯಾಶ್ರಮವು ಸಂಗೀತ ಲೋಕಕ್ಕೆ ಕೊಡುಗೆ ನೀಡಿದ ನಮ್ಮ ನಾಡಿನ ಶ್ರೇಷ್ಠ ಆಶ್ರಮವಾಗಿದೆ. ಪುಟ್ಟರಾಜ ಗವಾಯಿಗಳು ವಿಕಲಚೇತನ ಮಕ್ಕಳಿಗೆ ಸ್ವತಂತ್ರವಾಗಿ ಬದುಕು ಸಾಗಿಸಲು ಆತ್ವವಿಶ್ವಾಸ ಮೂಡಿಸುತ್ತಾ, ಸಂಗೀತ ಮತ್ತು ಪ್ರವಚನದ ಕಲೆಯನ್ನು ಕಲಿಸುತ್ತಿದ್ದರು ಎಂದು ಹೇಳಿದರು.
ಅಧ್ಯಕ್ಷತೆಯನ್ನು ದೇವಸ್ಥಾನ ಅಧ್ಯಕ್ಷ ಗುರುಬಸಯ್ಯ ಹಿರೇಮಠ ವಹಿಸಿದ್ದರು.
ಹಿರಿಯರಾದ ವಿಠ್ಠಲ ಜಗತಾಪ, ಬಸಯ್ಯಶಾಸ್ತ್ರೀ ಮಠಪತಿ, ನಿಂಗಪ್ಪ ನಿಂಬಾಳಕರ, ವಿಠ್ಠಲ ಕನಮಡಿ, ರಾಜಶೇಖರ ಉಮರಾಣಿ, ಎಸ್.ಬಿ.ಅಗ್ರಾಣಿ, ಶಿಕ್ಷಕ ಸಿದ್ದು ಧನಗೊಂಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಗಾನ ತರಂಗ ಸಂಗೀತ ಶಾಲೆಯ ಪ್ರಶಿಕ್ಷಣಾರ್ಥಿಗಳಾದ ಸುನೀತಾ ವಳಸಂಗ, ಸಾವಿತ್ರಿ ಹಿರೇಮಠ ಸಂಗಡಿಗರಿಂದ ಸಂಗೀತ ಸುಧೆ ಪ್ರೇಕ್ಷಕರ ಮನ ಸೆಳೆಯಿತು.