ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಸಂಚಾರ ಕಮಾಂಡ್ ಕೇಂದ್ರ ಸ್ಥಾಪನೆಗೆ ಈ ದೇಣಿಗೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸಂಚಾರ ಕಮಾಂಡ್ ಕೇಂದ್ರ ಸ್ಥಾಪಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಸಿದ್ದಸಿರಿ ಸೌಹಾರ್ದ್ ಸಹಕಾರಿ ಸಂಘ ನಿಯಮಿತದಿಂದ ರೂ.25 ಲಕ್ಷ ದೇಣಿಗೆ ಚೆಕ್ ನ್ನು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕ ರಾಜ್ಯ ಸೌಹಾರ್ದ್ ಸಂಯುಕ್ತ ಸಹಕಾರಿ ನಿ ಹಾಗೂ ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ರವರು, ವಿಜಯಪುರ ನಗರವು ಬೃಹತ್ತಾಗಿ ಬೆಳೆದಿದೆ ಮತ್ತು ವರ್ಷದಿಂದ ವರ್ಷಕ್ಕೆ ಎಲ್ಲ ದಿಕ್ಕಿನಲ್ಲಿಯೂ ಬೆಳೆಯುತ್ತಿದೆ. ಅದಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಾರ್ವಜನಿಕರ ಸುರಕ್ಷತೆಯಿಂದ ಈ ಸಂಚಾರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು, ಅಪಘಾತಗಳನ್ನು ತಡೆಯಲು, ಸುಧಾರಿತ ಸಂಚಾರ ಕಣ್ಗಾವಲು ವ್ಯವಸ್ಥೆಗಳು, ಪ್ರಮುಖ ವೃತ್ತಗಳ ಮೇಲ್ವಿಚಾರಣೆ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಮತ್ತು ಸಂಯೋಜಿತ ಸಂವಹನ ಸೌಲಭ್ಯ ಒಳಗೊಂಡ ಸಂಚಾರ ಕಮಾಂಡ್ ಕೇಂದ್ರವನ್ನು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲು ಆರ್ಥಿಕ ನೆರವು ಕೋರಿ ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಿದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿ ರೂ.25 ಲಕ್ಷ ದೇಣಿಗೆ ನೀಡಲಾಗಿದೆ ಎಂದರು.
ಸಿದ್ದಸಿರಿ ಸೌಹಾರ್ದ್ ಸಹಕಾರಿ ಸಂಘದ ನಿರ್ದೇಶಕರುಗಳಾದ ಪ್ರಬುಗೌಡ ದೇಸಾಯಿ, ಜಗದೀಶ ಕ್ಷತ್ರಿ, ವ್ಯವಸ್ಥಾಪಕ ನಿರ್ದೇಶಕರಾದ ಜ್ಯೋತಿಬಾ ಖಂಡಾಗಳೆ, ಮಹಾಪ್ರಬಂಧಕರು ಉಮೇಶ ಹಾರಿವಾಳ ಇತರರು ಉಪಸ್ಥಿತರಿದ್ದರು.