ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಜಾಪ್ರಭುತ್ವದ ಯಶಸ್ಸಿಗೆ ಮುಖ್ಯವಾಗಿ ಚುನಾವಣೆಗಳಲ್ಲಿ ಸಕಾರಾತ್ಮಕವಾಗಿ ಭಾಗವಹಿಸಬೇಕು ಹಾಗೂ ತಮ್ಮ ತಮ್ಮ ಮತಗಳನ್ನು ಹಣ ಮತ್ತು ಇತರೆ ಪ್ರಲೋಭನೆಗಳಿಗೆ ಮಾರಿಕೊಳ್ಳದೆ ವಿವೇಚನೆಯಿಂದ ಚಲಾಯಿಸಬೇಕು ಎಂದು ಕುಲಸಚಿವ ಶಂಕರಗೌಡ ಸೋಮನಾಳ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಘಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಪರಿಕಲ್ಪನೆ, ಅದರ ಹುಟ್ಟು ಹಾಗೂ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅದು ಬೆಳೆದುಬಂದ ದಾರಿಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕದ ನಿರ್ದೇಶಕ ಪ್ರೊ.ಮಲ್ಲಿಕಾರ್ಜುನ.ಎನ್.ಎಲ್. ಅವರು, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಅಗತ್ಯ. ಒಂದೊಮ್ಮೆ ಪ್ರಜಾಪ್ರಭುತ್ವ ಸಡಿಲಗೊಂಡರೆ ಅರಾಜಕತೆ ಉಂಟಾಗುವ ಅಪಾಯಗಳಿವೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಮಾನ್ಯ ಜ್ಞಾನದ ಕುರಿತು ರಸಪ್ರಸ್ನೆ ಸ್ಪರ್ಧೆಯನ್ನು ಕುಲಸಚಿವರು ನಡೆಸಿಕೊಟ್ಟರು. ರಸಪ್ರಶ್ನೆಯಲ್ಲಿ ವಿಜೇತ ವಿಧ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಂಜೀವಕುಮಾರ ಗಿರಿ ಪ್ರಾಧ್ಯಾಪಕರಾದ ಡಾ.ವೆಂಕೋಬಾ ನಾರಾಯಣಪ್ಪ, ಡಾ.ಬಾಬು ಆರ್.ಎಲ್, ಡಾ.ರಮೇಶ ಸೋನಕಾಂಬ್ಳೆ, ಡಾ.ಯಲ್ಲಪ್ಪ ಕೋಂಬಿನೋರ್ ಉಪಸ್ಥಿತರಿದ್ದರು.