ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸಲಹೆ
ಉದಯರಶ್ಮಿ ದಿನಪತ್ರಿಕೆ
ಗೊಳಸಂಗಿ: ಕೆಲವೇ ಕೆಲವು ಶಿಕ್ಷಕರಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಕಳಂಕ ಬರುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರು ಆದರ್ಶಮಯ ಜೀವನದ ಮೂಲಕ ಆದರ್ಶ ಸಮಾಜ ರೂಪಿಸುವ ಶಿಲ್ಪಿಗಳಾಗಬೇಕು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಸೋಮವಾರ ಗೊಳಸಂಗಿ ಗ್ರಾಮದ ಅಪ್ಪಣ್ಣ ದಳವಾಯಿ ಪ್ರೌಢ ಶಾಲಾ ಸಭಾಭವನದಲ್ಲಿ ಬಸವವನಬಾಗೇವಾಡಿ ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೊಲ್ಹಾರ, ನಿಡಗುಂದಿ ಹಾಗೂ ಬಸವವನಬಾಗೇವಾಡಿ ತಾಲೂಕ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸರ್ಕಾರ ತನ್ನ ಆದಾಯದಲ್ಲಿ ಅತಿಹೆಚ್ಚು ಅನುದಾನವನ್ನು ಶಿಕ್ಷಣ ಹಾಗೂ ವೈದ್ಯಕೀಯ ಇಲಾಖೆಗಳಿಗೆ ಆರ್ಥಿಕ ವೆಚ್ಚ ಮಾಡುತ್ತಿದೆ. ಹೀಗಾಗಿ ಶಿಕ್ಷಕರು ಗುಣಮಟ್ಟ ಹಾಗೂ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸಮಾಜ ತಮ್ಮ ಮೇಲೆ ಇರಿಸಿರುವ ನಿರೀಕ್ಷ ಹುಸಿ ಆಗದಂತೆ ವೃತ್ತಿ ಘನತೆ ಮೆರೆಯಬೇಕು ಎಂದು ಸಲಹೆ ನೀಡಿದರು.
ಒಟ್ಟು ಜನಸಂಖ್ಯೆಯಲ್ಲಿ
ಶೇ.3 ಜನರಿಗೆ ಸರ್ಕಾರ ಉದ್ಯೋಗ ಕೊಡಲು ಸಾಧ್ಯವಿಲ್ಲ. ಆದರೂ ಸರ್ಕಾರ ತನ್ನ ಆದಾಯದ ಬಹುತೇಕ ಹಣವನ್ನು ಸರ್ಕಾರಿ ನೌಕರರಿಗೆ ವೆಚ್ಚ ಮಾಡುತ್ತಿದೆ. ಈ ಅಂಶವನ್ನು ಅರಿತು ಸರ್ಕಾರಿ ನೌಕರರು ಹಾಗೂ ಶಿಕ್ಷಕರು ತಮ್ನ ಜವಾಬ್ದಾರಿ ನಿಭಾಯಿಸಿ, ಸಮಾಜದ ಋಣ ತೀರಿಸಬೇಕು ಎಂದು ಕಿವಿ ಮಾತು ಹೇಳಿದರು.
ವಿಜಯಪುರ ಜಿಲ್ಲೆ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಭಾರಿ ಕುಸಿತ ಕಂಡಿರುವುದು ಅತ್ಯಂತ ಖೇದಕರ ಸಂಗತಿ. ಜಿಲ್ಲೆಯ ಭವಿಷ್ಯ ಮಕ್ಕಳ ಶೈಕ್ಷಣಿಕ ಫಲಿತಾಂಶ ಹಾಗೂ ಶೈಕ್ಷಣಿಕ ಅಭಿವೃದ್ಧಿ ಮೇಲೆ ಅವಲಂವಿತವಾಗಿದೆ ಇದನ್ನರಿತು ಶಿಕ್ಷಕರು ಬದ್ಧತೆಯ ಸೇವೆ ಸಲ್ಲಿಸಲಿ ಎಂದರು.
ಬಸವವನಬಾಗೇವಾಡಿ ವಿರಕ್ತ ಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ವಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೇಖರ ದಳವಾಯಿ, ಗ್ರಾ.ಪಂ. ಅಧ್ಯಕ್ಷ ರಾವುತ್ ಸೀಮಿಕೇರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಹಿಬೂಬ ನಾಯ್ಕೋಡಿ, ಚಂದ್ರಶೇಖರ ಹಳೇಮನಿ, ಸಂತೋಷ ಗಣಾಚಾರಿ, ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಳದ ನಿರ್ದೇಶಕರಾದ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಹಾರಿವಾಳ, ಜಾನಪದ ಸಾಹಿತಿಗಳಾದ ಅಮರಯ್ಯಸ್ವಾಮಿ ಜಾಲಿಬೆಂಚಿ, ತಹಶಿಲ್ದಾರಾದ ವೈ.ಎಸ್. ಸೋಮನಕಟ್ಟಿ, ಎ.ಡಿ.ಅಮರವಾಡಗಿ, ಸಂತೋಷ ಮ್ಯಾಗೇರಿ, ತಾ.ಪಂ. ಇಒಗಳಾದ ವೆಂಕಟೇಶ ವಂದಾಲ, ಸುನಿಲ ಮದ್ದಿನ, ಬಿಇಒ ವಸಂತ ರಾಠೋಡ, ಎಂ.ಎಸ್.ಮುಕಾರ್ತಿಹಾಳ, ಹೊನ್ನಪ್ಪ ಗೊಳಸಂಗಿ , ಎಂ.ಎಂ. ಮುಲ್ಲಾ, ಸಲಿಂ ದಡೆದ ಇತರರು ವೇದಿಕೆ ಮೇಲೆ ಇದ್ದರು.