ವಿಚಾರ ಕ್ರಾಂತಿ ಕೃತಿಯ ವಿಚಾರ ಸಂಕಿರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮೂಳೆಗಾಂವ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಧಾರ್ಮಿಕ ಮೌಢ್ಯ ಮತ್ತು ಸಾಮಾಜಿಕ ಮೌಢ್ಯ ಜನರ ಬದುಕನ್ನು ಹಾಳು ಮಾಡುತ್ತಿದೆ, ಹೀಗಾಗಿ ಕುವೆಂಪು ಸಾಹಿತ್ಯ ಅಧ್ಯಯನದಿಂದ ಜನರಲ್ಲಿ ವೈಚಾರಿಕ ಮನೋಭಾವ ವೃದ್ದಿಯಾಗಿ ಸರಳ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ನಿವೃತ್ತ ಡಿಡಿಪಿಐ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮೂಳೆಗಾಂವ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಅಫಜಲಪುರ ಘಟಕದ ವತಿಯಿಂದ ಬರಗೂರು ರಾಮಚಂದ್ರಪ್ಪ ಸಂಪಾದಿತ ಕುವೆಂಪು ವಿಚಾರ ಕ್ರಾಂತಿ ಕೃತಿಯ ಕುರಿತು ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಮಾತನಾಡುತ್ತಾ, ಮೌಢ್ಯ ಮತ್ತು ಮೂಢ ನಂಬಿಕೆಗಳನ್ನು ನಮ್ಮ ಮೇಲೆ ಶತಮಾನಗಳಿಂದ ಹೇರಲಾಗುತ್ತಿದೆ, ಸತ್ಯ ಹೇಳಿದರೆ ನಂಬದ ಜನ, ಸುಳ್ಳನ್ನು ಬಹು ಬೇಗ ನಂಬಿ ಆಚರಣೆ ಮಾಡುತ್ತಾರೆ. ಇವುಗಳ ನಡುವೆ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಜನರಲ್ಲಿ ಬಿತ್ತುವುದು ಬಹಳ ಸವಾಲಿನ ಕೆಲಸ. ಆದರೂ ಭಾರತ ಜ್ಞಾನ ವಿಜ್ಞಾನ ಸಮಿತಿ ಈ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಸಲುವಾಗಿ ಬರಗೂರು ರಾಮಚಂದ್ರಪ್ಪನವರು ಸಂಪಾದಿಸಿರುವ ಕುವೆಂಪು ವಿಚಾರ ಕ್ರಾಂತಿಯಂತ ಕೃತಿಗಳ ವಿಚಾರ ಸಂಕಿರಣ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಸದಾಶಿವ ಮೇತ್ರಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮೌಢ್ಯ ಬಿತ್ತುವ ಜನರ ವಿರುದ್ದ ಮಾನವೀಯ ಮೌಲ್ಯ ಮತ್ತು ವೈಜ್ಞಾನಿಕ ಮನೋಭಾವ ಬಿತ್ತುವ ಕೆಲಸ ಭಾರತ ಜ್ಞಾನ ವಿಜ್ಞಾನ ಸಮಿತಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಖಜಾಂಚಿ ರಾಹುಲ್ ಜೀ ದೊಡ್ಮನಿ ಆಶಯ ನುಡಿಗಳನ್ನಾಡಿ, ಆದಷ್ಟು ಬೇಗ ಕೇಂದ್ರ ಸರ್ಕಾರ ಕುವೆಂಪು ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಿ ಎಂದರು.
ಕಲಬುರಗಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸಿದ್ರಾಮಪ್ಪ ಬಣಗಾರ ಕೃತಿಯ ಕುರಿತು ಮಾತನಾಡಿದರು. ಹಿರಿಯ ಸಾಹಿತಿ ಅಬ್ಬಾಸ್ ಅಲಿ ನದಾಫ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆ. ನಾರಾಯಣ, ಡಾ. ರಾಜೇಶ ಆಲಮೇಲಕರ್, ಬಿಜಿವಿಎಸ್ ತಾಲೂಕು ಅಧ್ಯಕ್ಷ ರವಿಚಂದ್ರ ಅತನೂರ, ಸಿದ್ದಣ್ಣಗೌಡ ಪಾಟೀಲ್, ಗೋಪಾಲ ಹಳ್ಯಾಳ, ಅಶೋಕ ತಂಬಾಕೆ, ರವಿ ಗೌರ, ರಾಹುಲ್ ಸಿಂಗೆ, ಗುರು ಚಾಂದಕವಟೆ, ಶರಣಯ್ಯ ಹಿರೇಮಠ, ಡಿ.ಎಂ ನದಾಫ್, ಭೀಮಣ್ಣ ಬೋನಾಳ, ಸತೀಶ ನಿಲಂಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಭಾರತ ಜ್ಞಾನವಿಜ್ಞಾನ ಸಮಿತಿ ತಾಲೂಕು ಉಪಾಧ್ಯಕ್ಷ ಲಕ್ಷ್ಮಣ ನಡುವಿನಕೇರಿ ನಿರೂಪಿಸಿದರು, ಅಧ್ಯಕ್ಷ ರವಿಚಂದ್ರ ಅತನೂರ ವಂದಿಸಿದರು.

