ಮುಳುಗಡೆ ಸಂತ್ರಸ್ತರ ಬೇಡಿಕೆಯಂತೆ ಪ್ರತಿ ಎಕರೆ ನೀರಾವರಿ ಭೂಮಿಗೆ 55 ಲಕ್ಷ ರೂ, ಒಣ ಬೇಸಾಯ ಭೂಮಿ ಪ್ರತಿ ಎಕರೆಗೆ 45 ಲಕ್ಷ ರೂ. ಬೆಲೆ ನಿಗದಿಗೆ ಮಾಜಿ ಸಚಿವ ಬೆಳ್ಳುಬ್ಬಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಸಂತ್ರಸ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಯುಕೆಪಿಯ ಪ್ರವಾಸಿ ಮಂದಿರದ ಮುಂದೆ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ವಿಜಯಪುರ-ಬಾಗಲಕೋಟ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳಗಡೆಯಾಗುವ ಸುಮಾರು 1 ಲಕ್ಷ 30 ಸಾವಿರ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ ಪ್ರತಿ ಎಕರೆ ನೀರಾವರಿ ಭೂಮಿಗೆ 55 ಲಕ್ಷ ರೂಪಾಯಿ, ಒಣ ಬೇಸಾಯಿಗೆ ಭೂಮಿ ಪ್ರತಿ ಎಕರೆಗೆ 45 ಲಕ್ಷ ರೂಪಾಯಿ ಬೆಲೆ ನಿಗಧಿ ಮಾಡಿ ಫರಿಹಾರ ನೀಡುವುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಸೆಪ್ಟೆಂಬರ್ 16 ರಂದು ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳಗಡೆಯ ಕುರಿತು ವಿಶೇಷ ಸಂಪುಟ ಸಭೆ ಕರೆದಿದ್ದು, ಆ ಸಭೆಯಲ್ಲಿ ಜಲಾಶಯಗಳಲ್ಲಿ ಮುಳಗಡೆಯಾಗಿರುವ ಮತ್ತು ಕಾಲುವೆಗಳಿಗಾಗಿ ಭೂ-ಸ್ವಾದೀನ ಮಾಡಿಕೊಂಡಿರುವ ಜಮಿನುಗಳಿಗೆ ರೈತರ ಬೇಡಿಕೆಯಂತೆ ಬೆಲೆ ನಿಗಧಿಮಾಡಬೇಕು. ಆಲಮಟ್ಟಿ ಜಲಾಶಯದಲ್ಲಿ ಮುಳಗಡೆಯಾದ ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ 1498 ಮನೆಗಳಿಗೆ ಮತ್ತು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಟಕ್ಕಳಕಿ ಗ್ರಾಮದ ಮನೆಗಳಿಗೆ ಮಾತ್ರ 3 ಷರತ್ತುಗಳು ಮೂಲಕ ಪರಿಹಾರ ಧನ ನೀಡಲಾಗಿತ್ತು. ಟಕ್ಕಳಕಿ ಗ್ರಾಮಕ್ಕೆ ಹಾಕಿದ್ದ 3 ಷರತ್ತುಗಳನ್ನು ಸಡಿಲಗೊಳಿಸಿ ಸರ್ವ ಸಂತ್ರಸ್ತರಂತೆ ಫರಿಹಾರ ನೀಡಲಾಗಿದೆ. ಆದರೆ ಕೊಲ್ಹಾರ ಗ್ರಾಮದ 1498 ಮನೆಗಳಿಗೆ ಹಾಕಿದ 3 ಷರತ್ತುಗಳ ಪೈಕಿ 2 ಷರತ್ತುಗಳನ್ನು ತಗೆದು ಹಾಕಲಾಗಿದೆ. ಕಾರಣ 1498 ಮನೆ ಮಾಲಿಕರಿಗೆ ಆಲಮಟ್ಟಿ ಯೋಜನೆಯಡಿಯಲ್ಲಿ ಕೊಲ್ಹಾರ ಗ್ರಾಮಕ್ಕೆ ಮಾತ್ರ ಅನ್ಯಾಯವಾಗಿದ್ದು ಹೆಚ್ಚುವರಿ ಫರಿಹಾರ ನೀಡಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಸಂಪುಟ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡದೇ ಇದ್ದರೆ ಸೆಪ್ಟೆಂಬರ್ 21 ರಿಂದ ಅಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಜಯಪುರ ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರೈತರ ಸಂತ್ರಸ್ತರ ಬೇಡಿಕೆಯಂತೆ ಭೂಮಿಗಳಿಗೆ ಈ ಸರಕಾರ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗತಿ ಪಡೆಯುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾದರೂ ರೈತರ ಬಗ್ಗೆ ಸ್ವಲ್ಪವೂ ಗಮನ ಕೊಡುತ್ತಿಲ್ಲ ರೈತರ ಕಷ್ಟದಲ್ಲಿ ಭಾಗಿಯಾಗುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಶೀಲವಂತ ಮಠದ ಕೈಲಾಸನಾಥ ಶ್ರೀಗಳು, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಂಡಲ ಅಧ್ಯಕ್ಷ ಸಿದ್ಧರಾಮ ಕಾಖಂಡಕಿ, ಆವಣ್ಣ ಗಾತಗಿ, ಇಸ್ಮಾಯಿಲಸಾಬ ತಹಸಿಲ್ದಾರ್, ನಂದಬಸಪ್ಫ ಚೌಧರಿ, ಬಾಬು ಬಜಂತ್ರಿ, ಬಸವರಾಜ ಅಂಬಲಜರಿ, ಜಗದೀಶ್ ಸುನಗದ, ಅಖಿಲಗೌಡ ಪಾಟೀಲ, ಸಂಗಪ್ಪ ಬಾಟಿ, ವಿಜಯ ಪೂಜಾರಿ, ಸಂಗಪ್ಪ ಚಿತ್ತಾಪುರ ಸೇರಿದಂತೆ ಇನ್ನಿತರರು ಇದ್ದರು.

