ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸುತ್ತಲೂ ಗಿಡ,ಮರಗಳಿಂದ ಕಂಗೊಳಿಸುವ ಕಾಡು, ನಳನಳಿಸುವ ಹಸಿರಿನಿಂದ ಕಣ್ಮನ ಸೆಳೆಯುವ ವನದ ಮಧ್ಯೆದಲ್ಲಿ ಹುಲಿ, ಸಿಂಹ. ಚಿರತೆ, ಕರಡಿ ಸಹಿತ ಹಲವು ವನ್ಯಜೀವಿಗಳ ದರ್ಶನ. ಇದು ಚಿಣ್ಣರ ವನದರ್ಶನದಲ್ಲಿ ಮಕ್ಕಳ ಸಂತಸದ ಕ್ಷಣಗಳಿಗೆ ಸಾಕ್ಷಿಯಾಗಿ ಮುದನೀಡಿತು.
ಅರಣ್ಯ ಇಲಾಖೆ ಸಿಂದಗಿ ಪ್ರಾದೇಶಿಕ ವಲಯದ ಚಿಣ್ಣರ ವನದರ್ಶನ ಮೂಲಕ ಮಕ್ಕಳಲ್ಲಿ ಅರಣ್ಯ, ಗಿಡಮರಗಳು, ಮತ್ತು ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಅಂಗವಾಗಿ ಎರಡು ದಿನಗಳ ಕಾಲ ಅರಣ್ಯಾಧಿಕಾರಿ ಜಿ.ಬಿ.ರಾಮಗಿರಿಮಠ ನೇತೃತ್ವದಲ್ಲಿ ಕೈಗೊಂಡ ವನದರ್ಶನದ ಮೂಲಕ ಇಂಗಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮದ್ದೇಬಿಹಾಳ ಅರಣ್ಯ ಇಲಾಖೆಯ ಸಸಿ ಉತ್ಪಾದನಾ ಕೇಂದ್ರ, ಹೊಸಪೇಟೆ ಹತ್ತಿರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯ ಹಾಗೂ ಮೀಸಲು ಅರಣ್ಯ ಪ್ರದೇಶ ಹಾಗೂ ದರೋಜಿ ಕರಡಿಧಾಮಗಳನ್ನು ವೀಕ್ಷಿಸಿ ಸಂತಸಪಟ್ಟರು.
ತಾಲ್ಲೂಕಿನ ಮುಳಸಾವಳಗಿ, ಭೈರವಾಡಗಿ, ದೇವರಹಿಪ್ಪರಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಈಗಾಗಲೇ ವನದರ್ಶನ ಮಾಡಿದ್ದು, ಈಗ ಈ ವರ್ಷ ಇಂಗಳಗಿ ಶಾಲೆಯ ಮಕ್ಕಳು ವನದರ್ಶನ ಭಾಗ್ಯ ಪಡೆದರು. ನಂತರ ಹಂಪಿ, ಕೊಪ್ಪಳದ ಗವಿಮಠಗಳಿಗೆ ಭೇಟಿ ನೀಡಿ ಖುಷಿಪಟ್ಟರು.
ಇದೇ ಸಂದರ್ಭದಲ್ಲಿ ಮುದ್ದೇಬಿಹಾಳ ಅರಣ್ಯ ಇಲಾಖೆಯಿಂದ ಎಲ್ಲ ಮಕ್ಕಳಿಗೂ ಬ್ಯಾಗ್ ವಿತರಿಸಲಾಯಿತು.
ಉಪಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ, ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ, ಉಪವಲಯ ಅರಣ್ಯಾಧಿಕಾರಿ ಎಂ.ಬಿ.ಕಂಟಿಕರ, ಮುಖ್ಯಶಿಕ್ಷಕ ರಾಜು ರಾಠೋಡ ಹಾಗೂ ಶಿಕ್ಷಕಿಯರು, ಮಕ್ಕಳು ಇದ್ದರು.
“ಅರಣ್ಯ ಇಲಾಖೆಯ ವನದರ್ಶನ ವಿಶೇಷವಾಗಿತ್ತು . ಕಾಡಿನ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ಕರಡಿಗಳನ್ನು ಅತ್ಯಂತ ಸಮೀಪದಿಂದ ಕಂಡು ಭಯವೇನಿಸಿದರೂ, ಖುಷಿಯಾಯಿತು.”
– ನಸ್ರೀನ್ ಮುಲ್ಲಾ, ಜ್ತೋತಿ ಹುಗ್ಗಿ
ವಿದ್ಯಾರ್ಥಿನಿಯರು

