ಲೇಖನ
– ಸಿದ್ಧಾಪುರ ಶಿವಕುಮಾರ್
ಲೇಖಕ-ಪತ್ರಕರ್ತ

ಉದಯರಶ್ಮಿ ದಿನಪತ್ರಿಕೆ
ಇದು ವೈವಿಧ್ಯಮಯ ಜಗತ್ತು. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಆಯ್ಕೆ ಆಕರ್ಷಣೆ ಮೆಚ್ಚುಗೆ ಅಭಿಮಾನ ಮೂಡುತ್ತವೆ. ಅದು ಅವರವರ ವೈಯಕ್ತಿಕ ಸ್ವಭಾವ ಆಸಕ್ತಿ ಗ್ರಹಿಕೆಗಳ ಮೇಲೆ ಸೃಜಿಸುವಂತಹದ್ದು. ನಮಗೆ ಮೆಚ್ಚುಗೆ ಆದದ್ದು ಇನ್ನೊಬ್ಬರಿಗೆ ಇಷ್ಟವಾಗಲಾರದು. ಆದರೆ ಅಭಿಮಾನ ಆದರ್ಶವಾಗಿರಲು ಅದರದೇ ಆದ ಗೌರವಯುತ ಗ್ರಹಿಕೆ ಮತ್ತು ಅಧ್ಯಯನ ಬೇಕಾಗುತ್ತದೆ. ಅಭಿಮಾನ ಮತ್ತು ಅಭಿಮಾನಿಸಲ್ಪಡುವ ವ್ಯಕ್ತಿತ್ವ ಮತ್ತು ನುಡಿದಂತೆ ನಡೆದ ಬದುಕಿನ ಚಾರಿತ್ರ್ಯ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿದ್ದಲ್ಲಿ ಅವರವರ ಅಭಿಮಾನಕ್ಕೂ ಹೆಮ್ಮೆ ಘನತೆ ಇರುತ್ತದೆ. ಹೀಗಾಗಿಯೇ ಅಭಿಮಾನ ಎಂಬುದು ಅದು ಪರಿಶುದ್ಧ ಅಂತಃಕರಣದ್ದಾಗಿರಬೇಕು. ಏಕಮುಖಿ ಧೋರಣೆಯಿಂದ ಕೂಡಿರಬಾರದು. ತಾನು ಮೆಚ್ಚಿಕೊಂಡವರನ್ನು ಹೊರತುಪಡಿಸಿ ಇತರರಿಗೆ ಶ್ರೇಯಸ್ಸು ಆದರೆ, ಅಸಂಬದ್ಧವಾಗಿ ಕಾಮೆಂಟಿಸಿ ಹೊಟ್ಟೆಕಿಚ್ಚಿನಿಂದ ನರಳಬಾರದು. ಈ ಮಾನಸಿಕ ಕೀಳರಮೆಯ ನರುಳುವಿಕೆ ಎಂದಿಗೂ ಸಜ್ಜನಿಕೆಯಾಗಲಿ ಪ್ರಬುದ್ಧ ಅಭಿಮಾನವಾಗಲಿ ಆಗಲಾರದು. ಇನ್ನೊಬ್ಬರ ಶ್ರೇಯಸ್ಸು ಗೆಲುವು ನಮ್ಮನ್ನು ಕಂಗೆಡಿಸಿದರೆ ನಮ್ಮನ್ನು ನಾವೇ ಅವಿವೇಕಿಗಳಂತೆ ತೋರಿಸಿಕೊಂಡಂತೆ. ದುರಾಭಿಮಾನ ನಮ್ಮ ವ್ಯಕ್ತಿತ್ವಕ್ಕೆ ಖಂಡಿತವಾಗಿ ದಕ್ಕೆ ತರುತ್ತದೆ. ಎಂಬ ಸಣ್ಣ ಅರಿವಿರಬೇಕು. ತಾನು ಮೆಚ್ಚುವ ಅಥವಾ ಅಭಿಮಾನಿಸುವವರಿಗೆ ಗೌರವ ಸಿಕ್ಕರೆ ಮಾತ್ರ ಅದು ಮಹತ್ವದ್ದು ಎಂದು ಬೀಗುವ ಮನಸ್ಥಿತಿ ಅಕ್ಷರಶಃ ಸಂಕುಚಿತವೇ. ಈ ಬಗ್ಗೆ ಪ್ರಾಮಾಣಿಕ ಆತ್ಮವಿಮರ್ಷೆ ಮಾಡಿಕೊಂಡರೆ ತಾನು ಮೆಚ್ಚಿದ ಶ್ರೇಷ್ಠ ವ್ಯಕ್ತಿತ್ವದಿಂದ ಕಲಿತ ಆದರ್ಶವಾಗಲಿ ಅರಿತು ನಡೆದ ಮೌಲ್ಯವಾಗಲಿ ಏನೆಂಬುದು ತಿಳಿದೀತು. “ನಾನು ಮೆಚ್ಚಿಕೊಂಡವರು ಇಡೀ ಜಗತ್ತಿಗೆ ಮೆಚ್ಚುಗೆಯಾಗುತ್ತಾರೆ” ಎಂಬ ಭ್ರಮೆಯಿಂದ ಪೂರ್ಣವಾಗಿ ಹೊರಬೇಕು. ಸೀಮಿತ ಧೋರಣೆಯ ಸಂಕುಚಿತ ಅಂಧಾಭಿಮಾನ ಎಂದಿಗೂ ಯಾರಿಗೂ ಘನತೆ ತಂದುಕೊಡಲಾರದು. ಪ್ರತಿಭೆ ಸಾಧನೆ ಸೇವೆ ಮತ್ತು ಶ್ರೇಷ್ಠತೆ ಎನ್ನುವುದು ಬಹುಮುಖವಾದದ್ದು. ಅದು ತನ್ನದೇ ರೀತಿಯಲ್ಲಿ ಸಾರ್ವಜನಿಕ ಮನ್ನಣೆ ಗೌರವ ಪುರಸ್ಕಾರ ಸಂಪಾದಿಸಿಕೊಂಡಾಗ ಗೌರವಿಸುವುದ ಬಿಟ್ಟು, ಅದನ್ನು ಹೀಯಾಳಿಸುವ ಮಟ್ಟಕ್ಕಿಳಿದರೆ ನಮಗೆ ನಾವೇ ಅವಮಾನಿಸಿಕೊಂಡಂತೆ ಸರಿ. ನಮ್ಮ ನಡುವಿನ ಸಾರ್ವಜನಿಕ ಹಿತಾಸಕ್ತಿಯ ಸಾಧನೆ/ಸಾಧಕರಿಗೆ ಮನ್ನಣೆ ಪುರಸ್ಕಾರ ಲಭಿಸಿದಾಗ ಮುಕ್ತ ಮನಸ್ಸಿನಿಂದ ಸಂಭ್ರಮಿಸಿದರೆ, ಅದು ನಿಜ ಶಿಕ್ಷಣವಂತನಿಂದ ಹೊಮ್ಮಿದ ನಾಗರೀಕತೆಯ ಸಂಕೇತ. ಅದಲ್ಲದೆ ಹೊಟ್ಟೆ ಕಿಚ್ಚಿನ ಕಿಡಿಗೇಡುತನ ದುರಾಭಿಮಾನವೇ ಅಲ್ಲದೆ ಮತ್ತೇನು? ದೊಡ್ಡತನದಿಂದ ದೊಡ್ಡವರಾಗುತ್ತಾರೆ. ಹಾಗೆಯೇ ಸಣ್ಣತನದಿಂದ ಸಣ್ಣವರಾಗುತ್ತಾರೆ. ಈ ಸತ್ಯವನ್ನು ಇತಿಹಾಸವೇ ಸಾರಿ ಹೇಳುತ್ತಲೇ ಇರುತ್ತದೆ. ತೆರೆದು ನೋಡಿ ಅರ್ಥೈಸಿಕೊಂಡು ಅನುಸರಿಸುವ ವಿವೇಕದ ವಿಶಾಲತೆ ಬೇಕಷ್ಟೆ. ವೈವಿಧ್ಯಮಯವಾದ ಈ ಸಮಾಜದಲ್ಲಿನ ಇತರರ ಆಯ್ಕೆ ಅಭಿಮಾನದ ಸಂಭ್ರಮಗಳಲ್ಲಿ ಭಾಗಿಯಾಗಿ (ಅಥವ ಮೌನವಹಿಸಿ) ನಮ್ಮ ವ್ಯಕ್ತಿತ್ವದ ತೂಕವನ್ನು ಹೆಚ್ಚಿಸಿಕೊಳ್ಳೋಣ.
