ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಇದೇ ದಿ.೨೨ ರಿಂದ ಸೆ.೩೦ ರವರೆಗೆ ಎಂಟು ದಿನಗಳ ಕಾಲ ನಡೆಯಲಿರುವ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದ ಯುವ ಪ್ರತಿನಿಧಿ ಮಂಡಳದ ನೇತೃತ್ವವನ್ನು ವಿಜಯಪುರ ಯುವತಿ ಕು.ಶಿಫಾ ಜಮಾದಾರ ವಹಿಸಲಿರುವುದು ಜಿಲ್ಲೆಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು.
ಇದೇ ಪ್ರಥಮ ಬಾರಿಗೆ ಜಾಗತಿಕ ಮಟ್ಟದ ಶೃಂಗ ಸಭೆಯಲ್ಲಿ ವಿಜಯಪುರ ಯುವ ಪ್ರತಿಭೆಯೊಬ್ಬರು ಭಾರತ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ವಿಶ್ವ ಅಣು ದಿನಾಚರಣೆ ಅಂಗವಾಗಿ ರಷ್ಯಾ ಸರ್ಕಾರ ತನ್ನ ರಾಜಧಾನಿಯಲ್ಲಿ ಸೆ.೨೨ ರಂದು ವಿಶ್ವ ಯುವ ಶೃಂಗ ಸಭೆ ಆಯೋಜಿಸಿದ್ದು, ಭಾರತದಿಂದ ಓರ್ವ ಯುವತಿ, ಓರ್ವ ಯುವಕ ಭಾಗವಹಿಸಲಿದ್ದು, ವಿಜಯಪುರ ಯುವತಿಗೆ ಈ ಅಪೂರ್ವ ಅವಕಾಶ ಪ್ರಾಪ್ತವಾಗಿರುವುದು ಜಿಲ್ಲೆಯಲ್ಲಿ ಹೊಸ ಸಂತಸದ ಅಲೆ ಸೃಷ್ಟಿಸಿದೆ. ಒಟ್ಟು ೧೬೦ ರಾಷ್ಟçಗಳ ಯುವ ಪ್ರತಿನಿಧಿಗಳು ಈ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿಶ್ವ ಶಾಂತಿಯಲ್ಲಿ ಯುವಜನರ ಪಾತ್ರ ಎಂಬ ವಿಷಯವಾಗಿ ಕು. ಶಿಫಾ ಜಮಾದಾರ ತಮ್ಮ ವಿದ್ವತಪೂರ್ಣ ವಿಚಾರಗಳನ್ನು ಮಂಡಿಸಲಿದ್ದಾರೆ.
ತನ್ನ ಅಧ್ಯಯನವನ್ನು ಶ್ರದ್ಧೆಯಿಂದ ಮುಂದುವರೆಸುವ ಜೊತೆ ಜೊತೆಗೆ ಸಮಾಜ ಸೇವೆಯಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕು. ಶಿಫಾ ಜಮಾದಾರ ಯುವತಿಯರ ಸಬಲೀಕರಣ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ೩.೫ ಕೋಟಿ ರೂ. ಮೊತ್ತದಲ್ಲಿ ಸ್ವಯಂ ಸೇವಾ ಸಂಸ್ಥೆಯ ಮೂಲಕ ಯುವತಿಯರಿಗೆ ಅತ್ಯಾಧುನಿಕ ಎ.ಐ. ತಂತ್ರಜ್ಞಾನಾಧಾರಿತ ಶೌಚಾಲಯಗಳ ನಿರ್ಮಾಣ, ಬಡ ಮಕ್ಕಳಿಗೆ ಅನುಕೂಲವಾಗಲು ಸ್ಕೂಲ್‌ಬ್ಯಾಗ್, ಲೇಖನ ಸಾಮಗ್ರಿ, ಜ್ಯಾಮಿತಿ ಬಾಕ್ಸ್ ಸೇರಿದ ವಿಶೇಷ ೮ಸಾವಿರ ಶೈಕ್ಷಣಿಕ ಕಿಟ್ ವಿತರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯರಿಗೆ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಅರಿವು, ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಪರಿಸರ ಜಾಗೃತಿ ಸಂದೇಶ ಹೀಗೆ ಅನೇಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಕನ್ನಡ, ಆಂಗ್ಲ, ಹಿಂದೆ ಭಾಷೆಯಲ್ಲಿ ಪ್ರಭುತ್ವ ಸಾಧಿಸಿ ತಮ್ಮ ವಿಚಾರಗಳನ್ನು ಅರ್ಥಪೂರ್ಣವಾಗಿ ಮಂಡಿಸುವ ಸಾಮರ್ಥ್ಯ ಹೊಂದಿರುವ ಕು.ಶಿಫಾ ಅವರಿಗೆ ಈ ಅಪೂರ್ವ ಅವಕಾಶ ಒಲಿದು ಬಂದಿದೆ.
ನವದೆಹಲಿಯ ಮೂಲಕ ರಷ್ಯಾ ರಾಜಧಾನಿ ಮಾಸ್ಕೋಗೆ ಶಿಫಾ ಪ್ರಯಾಣ ಬೆಳೆಸಲಿದ್ದು, ವಿಮಾನಯಾನ ಖರ್ಚು ಸೇರಿದಂತೆ ಸಕಲ ವೆಚ್ಚಗಳನ್ನು ರಷ್ಯಾ ಸರ್ಕಾರವೇ ಭರಿಸಲಿದೆ.

ಅಪೂರ್ವ ಅವಕಾಶ ದೊರಕಿದ್ದಕ್ಕೆ ಹೆಮ್ಮೆ ಇದೆ
ಭಾರತ ದೇಶಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ, ಜ್ಞಾನ ಪರಂಪರೆಯನ್ನು, ಶಾಂತಿಮಂತ್ರವನ್ನು ಜಗತ್ತಿಗೆ ಸಾರಿದ ದೇಶ ನಮ್ಮದು. ಈ ಭವ್ಯ ದೇಶದ ಪ್ರಜೆಯಾಗಿ ರುವುದನ್ನು ನನಗೆ ಹೆಮ್ಮೆ, ಅದರಲ್ಲೂ ಯುವ ಶೃಂಗ ಸಭೆಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ವಿಷಯ ನನಗೆ ಅತೀವ ಸಂತಸ ತರಿಸಿದೆ, ನನ್ನ ಬದುಕು ರೂಪಿಸುವಲ್ಲಿ ನೆರವಾದ ನನ್ನ ತಂದೆ, ತಾಯಿ, ಗುರುಗಳು ಹಾಗೂ ಸಮಸ್ತ ವಿಜಯಪುರ ಜನತೆಗೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವೆ, ಇಂದು ವಿಶ್ವಶಾಂತಿ ಅಗತ್ಯತೆ ಇದೆ, ಈ ವಿಷಯವನ್ನೇ ಅಲ್ಲಿ ಚರ್ಚೆಗೆ ಅವಕಾಶ ನೀಡಲಾಗಿದೆ ಎಂದು ಕು. ಶಿಫಾ ಜಮಾದಾರ ಪತ್ರಿಕೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.