ಪ್ರವಾಹ ಪೀಡಿತ ಊರುಗಳಿಗೆ ಜಿ.ಪಂ ಸಿಇಒ ಭೇಟಿ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಭೋರಿ ಹಳ್ಳ ತುಂಬಿ ಹರಿಯುತ್ತಲಿದ್ದು, ಹಳ್ಳದ ನೀರಿನಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಪ್ರವಾಹ ಪೀಡಿತ ಊರುಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಭನ್ವರಸಿಂಗ್ ಮೀನಾ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವಿಕ್ಷಣೆ ಮಾಡಿದರು.
ಬಳಿಕ ಮಾತನಾಡಿದ ಅವರು ಮಳೆ ಹೆಚ್ಚಾಗಿ ಭೋರಿ ಹಳ್ಳ ತುಂಬಿ ಹರಿಯುತ್ತಿದೆ, ಹಳ್ಳದ ನೀರು ಭೀಮಾ ನದಿ ಸೇರಿಕೊಂಡು ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಭೋರಿ ಹಳ್ಳದ ಪಾತ್ರದಲ್ಲಿರುವ ಊರುಗಳಲ್ಲಿ ಮಳೆ ನೀರು, ಹಳ್ಳದ ನೀರಿನಿಂದಾಗಿ ಸಮಸ್ಯೆ ಉಲ್ಬಣಿಸಿದೆ. ಸಮಸ್ಯೆ ಉಲ್ಬಣಿಸಿದ ಕಡೆಗಳಲ್ಲಿ ಸ್ಥಳೀಯ ಪಂಚಾಯಿತಿಯವರಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇವೆ. ಸಾರ್ವಜನಿಕರು ಕೂಡ ಹಳ್ಳದ ನೀರಿಗೆ ಇಳಿಯುವುದು ಬೇಡ ಎಂದು ಸಲಹೆ ನೀಡಿದರು.
ಭೋರಿ ಹಳ್ಳದ ನೀರು ಜನರ ಮನೆಗಳಿಗೆ ನುಗ್ಗಿದ್ದ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ದಿಕ್ಸಂಗಾ(ಕೆ) ಗ್ರಾಮದಲ್ಲಿ ಪ್ರವಾಹ ಪೀಡಿತ ಕುಟುಂಬಗಳಿಗಾಗಿ ಗ್ರಾಮ ಪಂಚಾಯಿತಿಯಿಂದಾಗಿ ಆಹಾರ ವ್ಯವಸ್ಥೆ ಮಾಡಲಾಗಿದೆ.
ತಾ.ಪಂ ಇಒ ವೀರಣ್ಣ ಕವಲಗಿ ಮಾತನಾಡಿ ಭೋರಿ ಹಳ್ಳದಲ್ಲಿ ವ್ಯಾಪಕ ನೀರು ಹರಿದು ಬರುತ್ತಿರುವುದರಿಂದ ಭೋರಿ ಹಳ್ಳದ ಪಕ್ಕದ ಊರುಗಳಲ್ಲಿ ಸಮಸ್ಯೆ ಆಗುತ್ತಿದೆ. ತಾಲೂಕು ಆಡಳಿತದಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಸಧ್ಯ ನೀರಿನ ಮಟ್ಟ ಕಮ್ಮಿಯಾಗುತ್ತಿದೆ. ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇದೆಲ್ಲದರ ನಡುವೆ ಜನರು ಕೂಡ ಜಾಗೃತಿಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
ಕರವೇ ತಾಲೂಕು ಅಧ್ಯಕ್ಷ ಶ್ರೀಕಾಂತ ದೀವಾನಜೀ ಮಾತನಾಡಿ, ಮಳೆ ಹೆಚ್ಚಾಗಿದ್ದು ಭೋರಿ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ನೀರು ಹೊಲಗದ್ದೆಗಳಿಗೆ ನುಗ್ಗಿದ್ದು ಸುಮಾರು ೫೦೦ ಎಕರೆಯಷ್ಟು ಬೆಳೆ ಹಾಳಾಗಿದೆ. ಅಲ್ಲದೆ ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ. ಕೂಡಲೇ ಸಂಬಂಧ ಪಟ್ಟವರು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹದ ನೀರಿನಿಂದ ಸಮಸ್ಯೆ ಅನುಭವಿಸುತ್ತಿರುವ ಜನರಿಗೂ ಪರಿಹಾರ ಕಲ್ಪಿಸುವ ಕೆಲಸ ತಾಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕ ರಮೇಶ ಪಾಟೀಲ್ ಸೇರಿದಂತೆ ಗ್ರಾಮಸ್ಥರು ಇದ್ದರು.