ಒಟ್ಟು ೧೪೨೦ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವ್ಯಾಜ್ಯವೊಂದರಲ್ಲಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ದಂಪತಿಗಳನ್ನು ಒಂದು ಮಾಡಿ ಲೋಕ್ ಅದಾಲತ್ ಜನಸಾಮಾನ್ಯರಿಗೆ ಸಹಾಯಕಾರಿಯಾಗುತ್ತಿದೆ ಎಂಬ ಸಂದೇಶವನ್ನು ಇಲ್ಲಿನ ನ್ಯಾಯಾಲಯ ಮತ್ತೊಮ್ಮೆ ಸಾಕ್ಷೀಕರಿಸಿದೆ.
ಮದುವೆಯಾಗಿ ಎರಡು ವರ್ಷಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದ ಮಹಿಳೆ, ತನ್ನ ಪತಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಒಂದು ವರ್ಷದಲ್ಲಿ ೯ ಬಾರಿ ನ್ಯಾಯಾಲಯಕ್ಕೆ ಅಲೆದಿದ್ದರು. ದಂಪತಿಗಳಿಬ್ಬರೂ ದೂರಾಗುವ ಸಂಭವವಿತ್ತು. ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಇಲ್ಲಿನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ರಾಮಮೂರ್ತಿ ಎನ್ ಅವರು ಎರಡೂ ಪಕ್ಷಗಳಿಗೆ ತಿಳುವಳಿಕೆ ಹೇಳಿ, ಮನವೊಲಿಸಿ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಕೌಟುಂಬಿಕ ದೌರ್ಜನ್ಯದ ಅಡಿ ದಾಖಲಾಗಿದ್ದ ಪ್ರಕರಣ, ರಾಜೀ ಸಂಧಾನದ ಮೂಲಕ ಸುಖಾಂತ್ಯ ಕಂಡು ದಂಪತಿಗಳಲ್ಲಿ ಮಂದಹಾಸ ಮೂಡಿದೆ.
ಈ ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿನ ಒಟ್ಟು ೭೭೩೯ ಬಾಕಿ ಇರುವ ಪ್ರಕರಣಗಳ ಪೈಕಿ, ೨೫೧೬ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅವುಗಳಲ್ಲಿ ಒಟ್ಟು ೧೪೨೦ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್.ಎ.ಸಿ ಇಪಿ ಪ್ರಕರಣಗಳು, ಎಮ್.ವಿ.ಸಿ-ಇ.ಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಜೊತೆಗೆ ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳು ಸೇರಿ ಒಟ್ಟು ೯೮೧ ಪ್ರಕರಣಗಳಲ್ಲಿ ೧೮೩ ಪ್ರಕರಣಗಳು ರಾಜಿ ಸಂಧಾನದ ಮೂಲಕ ೫ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸಚಿನ್ ಕೌಸಿಕ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಇವರುಗಳು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ಈ ವೇಳೆ ನ್ಯಾಯವಾದಿಗಳಾದ ಎಂ.ಬಿ.ಬಿರಾದಾರ ಮತ್ತು ಆರ್.ವಾಯ್.ನಾಲತವಾಡ ಮಾತನಾಡಿ ಲೋಕ್ ಅದಾಲತ್ ನಿಂದ ಪಕ್ಷಗಾರರಿಗೆ ಆಗುವ ಲಾಭಗಳ ಬಗ್ಗೆ ವಿವರಿಸಿದರು.
ಈ ಲೋಕ ಅದಾಲತ್ ನಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ಎಚ್.ಜಿ.ನಾಗೋಡ, ಎನ್.ಬಿ.ಮುದ್ನಾಳ, ಹಾಗೂ ಎಮ್.ಆರ್.ಮುಜಾವರ ವಕೀಲರುಗಳು, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ನ್ಯಾಯವಾದಿಗಳಾದ ವಿ.ಎಮ್.ನಾಗಠಾಣ, ಜೆ.ಎ.ಚಿನಿವಾರ, ಎಂ.ಎಸ್.ನಾವದಗಿ, ಎಸ್.ಎಂ.ಗುಡದಿನ್ನಿ, ಎಸ್.ಆರ್.ಸಜ್ಜನ, ಎನ್.ಜಿ.ಕುಲಕರ್ಣಿ, ಎನ್.ಆರ್.ಮೋಕಾಶಿ, ಎಮ್.ಆರ್.ಪಾಟೀಲ, ಸಂಗಮೇಶ ಹೂಗಾರ, ಎಸ್.ಆರ್.ಜೋಗಿ, ಚೇತನ ಶಿವಶಿಂಪಿ ಸೇರಿದಂತೆ ಅನೇಕ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಲೋಕ್‌ಅದಾಲತ್ ಯಶಸ್ವಿಗೆ ಶ್ರಮಿಸಿದರು.
“ಪಕ್ಷಗಾರರ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಿ, ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರದಿಂದ ಪ್ರತೀ ೩ ತಿಂಗಳಿಗೊಮ್ಮೆ ಲೋಕ್ ಅದಾಲತನ್ನು ಹಮ್ಮಿಕೊಳ್ಳುತ್ತಿದ್ದು ಪಕ್ಷಗಾರರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರಬೇಕು.”
– ಸಚಿನ್ ಕೌಶಿಕ್
೫ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
“ಕಾನೂನು ಸಮರ ನಡೆಸುತ್ತಿರುವ ಜನಸಾಮಾನ್ಯರಿಗೆ ತ್ವರಿತ ನ್ಯಾಯ ಒದಗಿಸಲು ಪ್ರಾರಂಭಿಸಲಾದ ಲೋಕ್ ಅದಾಲತ್ ಸಾಕಷ್ಟು ಯಶಸ್ವಿ ಕಾಣುತ್ತಿದೆ. ವ್ಯಾಜ್ಯಗಳನ್ನು ಸುಲಭವಾಗಿ ಬಗೆಹರೆಸಿಕೊಳ್ಳಲು ಲೋಕ್ ಅದಾಲತ್ ರಾಜಮಾರ್ಗ. ಜನತೆಗೆ ಈ ಸೇವೆಯನ್ನು ಇನ್ನಷ್ಟು ನೀಡಲು ಖಾಯಂ ಲೋಕ್ ಅದಾಲತ್ ಜಾರಿಯಾಗುತ್ತಿದೆ. ಇದರ ಸದ್ಬಳಕೆ ಹೊಣೆ ಪಕ್ಷಗಾರರ ಮೇಲಿದೆ.”
– ರವೀಂದ್ರಕುಮಾರ ಕಟ್ಟಿಮನಿ
ಅಧ್ಯಕ್ಷರು, ತಾಲೂಕು ಕಾನೂನು ಸೇವಾ ಸಮಿತಿ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು