ನರಸಲಗಿ ರಾಮಕೃಷ್ಣ ಆಶ್ರಮದ ಶ್ರೀಕಾಂತ್ ಗುರುಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಗತ್ತಿನಲ್ಲಿ ಜ್ಞಾನವೇ ಶ್ರೇಷ್ಠ. ಪುಸ್ತಕಗಳು ವಿದ್ಯಾರ್ಥಿಗಳನ್ನು ಎತ್ತರ ಮಟ್ಟಕ್ಕೆ ಕರೆದುಕೊಂಡು ಹೋಗುವ ಶಕ್ತಿ ಹೊಂದಿವೆ ಎಂದು ನರಸಲಗಿ ರಾಮಕೃಷ್ಣ ಆಶ್ರಮದ ಶ್ರೀಕಾಂತ್ ಗುರುಜಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಡಾ ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನರಸಲಗಿ ಯಲ್ಲಿ “ಅಧಿಕಾರಿಗಳ ನಡೆ ವಸತಿ ನಿಲಯದ ಕಡೆ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಸ್ಸು ಮತ್ತು ಬುದ್ಧಿ ಏಕವಾದಾಗ ಮಾತ್ರ ಸಾಧನೆ ಸಾಧ್ಯವಾಗುವುದು, ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಒದಗಿಸಿದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಜೀವನವನ್ನು ಸುಂದರಗೊಳಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೋಡೆಲ್ ಅಧಿಕಾರಿಗಳಾದ ಎಮ್ ಟಿ ಬಿರಾದಾರ ಮಾತನಾಡಿ, ನಿಲಯದಲ್ಲಿ ವಾಸಿಸುವ ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ಸುಂದರಗೊಳಿಸಲು ಓದುವುದು ನಿಮ್ಮ ಸಂಗಾತಿ ಆಗಬೇಕು, ನಿರಂತರ ಅಭ್ಯಾಸ ನಿಮ್ಮ ಶ್ರೇಷ್ಠ ನಾಗರಿಕರನ್ನಾಗಿ ಮಾಡುವುದು ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ಹೇಳಿ, ನಿಲಯದಲ್ಲಿ ಅಧಿಕಾರಿಗಳು ವಾಸ್ತವ್ಯ ಮಾಡಿ ವಿದ್ಯಾರ್ಥಿಗಳೊಂದಿಗೆ ಬೆರೆತು, ವಿದ್ಯಾರ್ಥಿಗಳಿಗೆ ಭರವಸೆ ತುಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ತಾಲೂಕು ಜನಪದ ಸಾಹಿತ್ಯ ಪರಿಷತ್ ನ ಅಧ್ಯಕ್ಷ ದೇವೇಂದ್ರ ಗೋನಾಳ ಅವರು ಮಾತನಾಡಿ, ಮೌಲ್ಯಯುತವಾದ ಶಿಕ್ಷಣ ಪಡೆಯಲಿಕ್ಕೆ ಸಂಸ್ಕಾರ ಬೇಕು, ಈ ಜಗತ್ತಿನಲ್ಲಿ ಏನೆಲ್ಲಾ ಕದಿಯಬಹುದು ಆದರೆ ಜ್ಞಾನವನ್ನು ಕದಿಯಲಿಕ್ಕೆ ಸಾಧ್ಯವಿಲ್ಲ ಆದ್ದರಿಂದ ಯಾರೂ ಕದಿಯಲಾಗದ ವಿದ್ಯೆಗೆ ವಿದ್ಯಾರ್ಥಿಗಳು ದೊರೆಗಳಾಗಬೇಕು,
ಅರಿವು ಮತ್ತು ಅಕ್ಷರವನ್ನು ಕಾಯಕ ರೂಪದಲ್ಲಿ ಸಮಾಜ ಕಲ್ಯಾಣ ಇಲಾಖೆ ಮಾಡುತ್ತಿದೆ
ಎಲ್ಲರಲ್ಲೂ ಸಮಾನತೆಯನ್ನು ಸಾರುವುದು ವಿದ್ಯಾರ್ಥಿ ನಿಲಯಗಳ ಸಂದೇಶವಾಗಿದೆ
ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ಪಾತ್ರ ಬಹಳ ದೊಡ್ಡದು ಜ್ಞಾನದ ಮೂಲಕ ಜಗತ್ತನ್ನು ಅರಿಯಲಿಕ್ಕೆ ಸಾಧ್ಯವಿದೆ, ಮಹಾನ್ ವ್ಯಕ್ತಿಗಳಾಗಲಿಕ್ಕೆ ಜ್ಞಾನವೇ ಬಹಳ ಮುಖ್ಯ. ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು,
ತಪ್ಪಿ ನಡೆದಾಗ ಸರಿ ದಾರಿಗೆ ತರುವ ಕೆಲಸ ಆದರ್ಶ ಪುರುಷರಿಂದ ಆಗುವುದು,
ಇಂದು ಬುದ್ದ, ಬಸವಣ್ಣ, ಅಂಬೇಡ್ಕರ್ ರವರ ಮಾತುಗಳು ಮಾರ್ಗದರ್ಶನವಾಗಿವೆ,
ನಡೆಯೊಂದು ನುಡಿಯೊಂದು ಆದ್ರೇ ಆದರ್ಶ ಜೀವನ ಸಾಧ್ಯವಾಗದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಸವನಬಾಗೇವಾಡಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜು ಹಿರೇಮನಿ ಅವರು ಮಾತನಾಡಿ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಇವತ್ತಿನಿಂದಲೇ ಪರೀಕ್ಷೆಗಳನ್ನು ಎದುರಿಸಲು ಸನ್ನದ್ಧರಾಗ ಬೇಕು, ವಿಷಯವಾರು ಅಭ್ಯಾಸವನ್ನು ಕೈಗೊಂಡು, ಪರೀಕ್ಷೆಗಳಿಗೆ ಸಿದ್ದರಾಗಬೇಕು,
ನಿಲಯದ ವಿದ್ಯಾರ್ಥಿಗಳಿಗೆ ಓದಲು ಸಾಕಷ್ಟು ಸಮಯವಿದೆ, ವೇಳಾಪಟ್ಟಿಯನ್ನು ತಯ್ಯಾರಿರಸಿಕೊಂಡು ಓದಿದಾಗ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಇಲಾಖೆಗೆ ಹೆಸರು ತಂದು ಕೊಡಬೇಕು,
ಕನಸುಗಳನ್ನು ನನಸು ಮಾಡಿಕೊಳ್ಳುಲು ಇದು ಸರಿಯಾದ ಸಮಯ ಎಂದರು.
ಕಾರ್ಯಕ್ರಮದಲ್ಲಿ ಎ ಎಮ್ ನರಸರಡ್ಡಿ, ವಿದ್ಯಾಧರ ದೊಡಮನಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎಮ್ ಎಮ್ ದಫೇದಾರ, ಜಿ ಐ ಬೆಕಿನಾಳ, ಎಸ್ ಎಸ್ ಹೊಳಿ, ಬಸವರಾಜ ಚಕ್ರವರ್ತಿ, ಬಸವರಾಜ ಬಡಿಗೇರ, ಮೋಹನ್ ಜಾದವ್, ಸೈಪಾನ್ ಕೊರ್ತಿ, ಹುಸೇನಪ್ಪ, ಭೈರಪ್ಪ ಕುಂಬಾರ, ರಾಜೇಶ್ವರಿ ಗೋಗಿ, ಮೋಹಿನಿ ಬರಗಿ, ಶಾಂತಾ ಕಸ್ತೂರಿ, ಜಯಶ್ರೀ ಸಗರನಾಳ ಉಪಸ್ಥಿತರಿದ್ದರು
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ನಿಲಯ ಪಾಲಕರಾದ ರಸೂಲ್ ನದಾಫ್ ಮಾತನಾಡಿದರು, ಕಾರ್ಯಕ್ರಮವನ್ನು ವೀರೇಶ್ ಗೂಡಲಮನಿ ನಿರೂಪಿಸಿದರೆ ಅಶೋಕ ನಡವಿನಮನಿ ವಂದಿಸಿದರು.