ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹುಟ್ಟಿದ ಮೇಲೆ ಸಾವು ಖಚಿತ. ನಮ್ಮ ಸಾವಿನ ಬಳಿಕ ಜನ ನಮ್ಮನ್ನು ಗುರುತಿಸಬೇಕೆಂದರೆ ನಮ್ಮ ಜೀವಿತ ಕಾಲದಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದರೆ ಮಾತ್ರ ನಮ್ಮ ಹೆಸರು ಅಜರಾಮರವಾಗಿ ಉಳಿಯಲು ಸಾಧ್ಯ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.
ತಾಲೂಕಿನ ಬಿದರಕುಂದಿಯ ಆರ್.ಎಂ.ಎಸ್.ಎ ಶಾಲೆಯ ರಸ್ತೆಯಲ್ಲಿರುವ ಮನಿಯಾರ್ ಶಾಲಾ ಆವರಣದಲ್ಲಿ ಮನಿಯಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಯೂಬ ಮನಿಯಾರ ಅವರ ತಂದೆ ತಾಯಿಗಳ ಸ್ಮರಣಾರ್ಥ ಹಾಗೂ ಶ್ರಾವಣ ಮಾಸದ ನಿಮಿತ್ಯ ಹಮಿಕೊಳ್ಳಲಾಗಿದ್ದ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧ ವಿತರಣೆ ಮತ್ತು ಮಾಶಾಸನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಗವಂತ ನೀಡಿದ ಸಂಪತ್ತನ್ನು ಸಮಾಜದಲ್ಲಿರುವ ಅಶಕ್ತ ಜನತೆಗೆ ಧಾರೆ ಎರೆದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಆ ಕಾರ್ಯವನ್ನು ಸತತ ೧೨ ವರ್ಷಗಳಿಂದ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಸಮಾಜ ಸೇವಕ ಅಯೂಬ ಮನಿಯಾರ್ ಮಾಡುತ್ತಿದ್ದು ಬರುವ ದಿನಗಳಲ್ಲಿ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವ ಶಕ್ತಿ ಭಗವಂತ ಅವರಿಗೆ ಕರುಣಿಸಲಿ ಎಂದರು.
ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ಮನಿಯಾರ್ ಕುಟುಂಬವನ್ನು ನಾನು ಬಾಲ್ಯದಿಂದ ಬಲ್ಲೆ. ಈ ಕುಟುಂಬ ನಮ್ಮ ಮನೆತನಕ್ಕೆ ಬಹಳ ಆಪ್ತ. ಅಯೂಬ ಅವರ ತಂದೆ ಮದಸಾಬ ಕೂಡ ಸಮಾಜ ಸೇವೆಯಲ್ಲಿ ಮುಂದಿದ್ದರು. ಜನತೆಗೆ ಉಚಿತವಾಗಿ ನಾಟಿ ಔಷಧ ನೀಡುತ್ತಿದ್ದರು. ಸಧ್ಯ ಅವರ ಸ್ಮರಣಾರ್ಥ ಅಯೂಬ ಅವರು ಸಾಕಷ್ಟು ವರ್ಷಗಳಿಂದ ಬಡ ಜನತೆಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸೆ ಇನ್ನೀತರ ಸಮಾಜ ಸೇವೆಯಲ್ಲಿ ತೊಡಗಿರುವದು ಶ್ಲಾಘನೀಯ. ಇವರ ಈ ಶ್ರೀಮಂತ ಮನಸ್ಸಿಗೆ ಅಭಿನಂದಿಸುವೆ ಎಂದರು.
ವಾಗ್ಮಿ ಲಾಲ್‌ಹುಸೇನ ಕಂದಗಲ್ಲ ಮಾತನಾಡಿ, ಭೂಮಿಯಲ್ಲಿ ಅಸಹಾಯಕರಂತೆ ದುಡ್ಡಿದ್ದವರೂ ಜೀವಿಸುತ್ತಿದ್ದಾರೆ. ದುಡ್ಡಿದ್ದವರ ಪೈಕಿ ಅತ್ಯಂತ ಕಡಿಮೆ ಜನ ಸಮಾಜಕ್ಕಾಗಿ ತಮ್ಮಲ್ಲಿರುವ ದುಡ್ಡನ್ನು ಸಮಾಜಕ್ಕೆ ಸಮರ್ಪಿಸುತ್ತಾರೆ. ಅಂಥವರ ಸೇವೆ ಸಮಾಜದ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಅದರಂತೆ ಮನಿಯಾರ ಕುಟುಂಬ ತಮ್ಮಲ್ಲಿರುವ ದುಡ್ಡನ ಕೆಲ ಭಾಗವನ್ನು ಸಮಾಜಕ್ಕೆ ಅರ್ಪಿಸುತ್ತಾ ಮಾದರಿಯ ಕಾರ್ಯವನ್ನು ಮಾಡುತ್ತಿದ್ದಾರೆ. ಇವರ ಈ ಸೇವೆ ವರ್ಷದಿಂದ ವರ್ಷಕ್ಕೆ ಹೆಚ್ಚಲಿ ಎಂದು ದೇವರಲ್ಲಿ ಪ್ರಾರ್ಥಿಸುವದಾಗಿ ತಿಳಿಸಿದರು.
ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಮನುಷ್ಯ ಎಷ್ಟೇ ಶಕ್ತಿಶಾಲಿ, ಸಿರಿವಂತ, ಜಾಣನಾಗಿದ್ದರೂ ಆತ ಸ್ವಾವಲಂಬಿಯಾಗಿ ಬದುಕಲು ಕಣ್ಣು ಮತ್ತು ಅವುಗಳ ಸ್ಪಷ್ಟ ದೃಷ್ಟಿ ಬಹಳ ಅವಶ್ಯ. ಭಗವಂತ ಎಲ್ಲರಿಗೂ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ನೀಡಿಲ್ಲ. ಅಂತಹ ಬಡವರನ್ನು ಹುಡುಕಿ ಉಚಿತ ತಪಾಸಣೆ ಮತ್ತು ಶಸ್ತç ಚಿಕಿತ್ಸೆ ಮಾಡಿಸುವ ಮೂಲಕ ತಾವೂ ಸಮಾಜ ಸೇವೆಯಲ್ಲಿ ತೊಡಗಿ ನನಗೂ ಅವಕಾಶ ಮಾಡಿ ಕೊಟ್ಟು ಮಾದರಿಯ ಪುಣ್ಯ ಕಾರ್ಯ ಮಾಡುತ್ತಿದ್ದಾರೆ. ಇವರ ಈ ಸೇವೆ ಕೇವಲ ಒಂದು ಧರ್ಮ, ಜಾತಿ, ಪಕ್ಷಕ್ಕೆ ಅಂಟಿಕೊಳ್ಳದೇ ಸಾಗುತ್ತಿರುವದು ಮತ್ತೊಂದು ಹೆಮ್ಮೆ. ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಇವರ ಸೇವೆ ಇನ್ನಷ್ಟು ಹೆಚ್ಚಲಿ ಎಂದರು.
ಸಮಾಜ ಸೇವಕ ಅಯೂಬ್ ಮನಿಯಾರ, ಶಿಕ್ಷಕಿ ರೇಣುಕಾ ಹಿರೇಮಠ ಮಾತನಾಡಿದರು.
ವಿವಿಧ ಸಂಘಟನೆಗಳು, ಮನಿಯಾರ ಅವರ ಆಪ್ತರು ಮನಿಯಾರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಮನಿಯಾರ ಕುಟುಂಬಸ್ಥರು ಸಚಿವ ದರ್ಶನಾಪೂರ ಮತ್ತು ಶಾಸಕ ಸಿ.ಎಸ್.ನಾಡಗೌಡರನ್ನು ಬೃಹದಾಕಾರದ ಗುಲಾಬಿ ಹೂಮಾಲೆಯೊಂದಿಗೆ ಸನ್ಮಾನಿಸಿ ಗೌರವಿಸಿದರು. ವಿಜಯಪುರದ ಬನಶ್ರೀ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ರೂಪಸಿಂಗ್ ಲೂನಾರಿ, ಅಯೂಬ ಅವರ ಪುತ್ರ ಅಫ್ತಾಬ್ ಮನಿಯಾರ್, ದಾದಾ ಎತ್ತಿನಮನಿ, ಮಹೆಬೂಬ ನಾಲತವಾಡ, ಐ.ಎಲ್.ಮಮದಾಪೂರ, ಹಾಜಿಮಲಿಂಗ್ ಎಕಿನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

