ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವ ಭವನದಲ್ಲಿ ಸೆ.13 ರಂದು ಸಂಜೆ 4 ಗಂಟೆಗೆ ವಚನ ಸಾಹಿತ್ಯ ವಿಚಾರ ಸಂಕಿರಣ ಹಾಗೂ ಸೆ.14 ರಂದು ಬೆಳಗ್ಗೆ 11 ಗಂಟೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 31ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜರುಗಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಸಾಹಿತಿ ಜಂಬುನಾಥ ಕಂಚ್ಯಾಣಿ ಹಾಗೂ ಪರಿಷತ್ತಿನ ತಾಲೂಕಾಧ್ಯಕ್ಷ ವೀರಣ್ಣ ಮರ್ತುರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮವನ್ನು ಇದುವರೆಗೂ ರಾಜ್ಯದ ನಾನಾ ಭಾಗಗಳಲ್ಲಿ ಆಯೋಜನೆ ಮಾಡುತ್ತಾ ಬಂದಿದೆ. ಈ ವರ್ಷವು ಬಸವೇಶ್ವರರು ಈ ಪುಣ್ಯಭೂಮಿಯಲ್ಲಿ ಈ ಸಭೆಯನ್ನು ಹಮ್ಮಿಕೊಂಡಿರುವುದು ನಮಗೆಲ್ಲ ಗೌರವದ ವಿಷಯವಾಗಿದೆ. ಎರಡು ದಿನಗಳ ನಡೆಯಲಿರುವ ಕಾರ್ಯಕ್ರಮದ ಎಲ್ಲ ಸಿದ್ದತೆಗಳನ್ನುಈಗಾಗಲೇ ಮಾಡಿಕೊಳ್ಳಲಾಗಿದೆ. ಎಂದ ಅವರು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿರುವ ನಿರೀಕ್ಷೆ ಇದೆ. ಸೆ.13 ರಂದು ಆಗಮಿಸುವ 400 ಕ್ಕೂ ಹೆಚ್ಚು ಸದಸ್ಯರಿಗೆ ಊಟ, ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಸೆ. 13 ರಂದು ಸಂಜೆ ನಾಲ್ಕು ಗಂಟೆಗೆ ಬಸವ ಭವನದಲ್ಲಿ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ವಚನ ಸಾಹಿತ್ಯದಲ್ಲಿ ನಡೆ ನುಡಿ ಸಿದ್ಧಾಂತದ ಕುರಿತು ಧಾರವಾಡದ ಡಾ. ಸಂಗಮನಾಥ ಲೋಕಾಪುರ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವನ್ನು ನಾಡಿನ ಖ್ಯಾತ ವಿದ್ವಾಂಸ ಡಾ. ಗೊ.ರು. ಚನ್ನಬಸಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಸಾಹಿತಿಗಳು ಉಪಸ್ಥಿತರಿರುತ್ತಾರೆ. ನಂತರ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆ ನಡೆಯಲಿದೆ ಎಂದರು.
ಸೆ.14 ರಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಂತರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 31ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಪರಿಷತ್ತಿನ ಗೌರವಾಧ್ಯಕ್ಷರಾದ ಸುತ್ತೂರಿನ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗದಗಿನ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಲಿದೆ. ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ವಹಿಸುವರು. ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಪರಿಷತ್ತಿನ ವಿವಿಧ ಪದಾಧಿಕಾರಿಗಳು, ಗಣ್ಯರು ಇತರರು ಉಪಸ್ಥಿತರಿರುವರು. ಡಾ. ಗೊ.ರು. ಚನ್ನಬಸಪ್ಪ ಮಾರ್ಗದರ್ಶನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಪರಿಷತ್ತಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಬಸವನಬಾಗೇವಾಡಿ ಘಟಕದ ಅಧ್ಯಕ್ಷ ವೀರಣ್ಣ ಮರ್ತುರ ಹಾಗೂ ಮುದ್ದೇಬಿಹಾಳದ ಕದಳಿ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ರಾಂಪುರ ಅವರಿಗೆ ಬಸವರಾಜೇಂದ್ರ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಜಂಬುನಾಥ ಕಂಚ್ಯಾಣಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಜಿ.ಯಾದವಾಡ, ಆರ್.ಜಿ.ಅಳ್ಳಗಿ, ಎಸ್.ಎಸ್.ಝಳಕಿ, ಎಂ.ಜಿ.ಆದಿಗೊಂಡ, ವಿವೇಕಾನಂದ ಕಲ್ಯಾಣಶೆಟ್ಟಿ, ಎಸ್.ಕೆ.ಸೋಮನಕಟ್ಟಿ, ವರೀಶ ಕುಂಟೋಜಿ, ಎಸ್.ಎ.ಮನಗೂಳಿ, ಎಸ್.ಎ.ದೇಗಿನಾಳ, ಎಸ್.ಜಿ.ಮೊಕಾಶಿ, ಪ್ರೊ.ಪಿ.ಎಲ್.ಹಿರೇಮಠ ಇದ್ದರು.