ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಣವೇ ಶಕ್ತಿ, ಶಿಕ್ಷಣವೇ ಎಲ್ಲ ಶಕ್ತಿಗಿಂತ ಮೇಲು, ಶಿಕ್ಷಣದಿಂದ ಬಡತನ ನಿರ್ಮೂಲನೆ ಆಗುತ್ತದೆ ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಕಾತ್ರಾಳ ಗ್ರಾಮದ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯಾಗಿ ಉನ್ನತಿಕರಿಸಿ ಒಂಬತ್ತನೇ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಚಿವ ಎಂ.ಬಿ. ಪಾಟೀಲ ಅವರ ಶೈಕ್ಷಣಿಕ ಕಾಳಜಿಯಿಂದ ಗ್ರಾಮದ ಹೆಣ್ಣು ಮಕ್ಕಳು ಮಧ್ಯದಲ್ಲಿ ಶಾಲೆ ಬಿಡುವದು ನಿಲ್ಲಿಸಲು, ಬಾಲ್ಯ ವಿವಾಹ ತಡೆಗಟ್ಟಲು, ಬಡವರ ಹಾಗೂ ಹಿಂದುಳಿದ ಕುಟುಂಬಗಳಿಗೆ ಅತೀ ಅವಶ್ಯಕತೆ ಇರುವ ಸೌಲಭ್ಯವನ್ನು ನೆರವೇರಿಸಿ ಪ್ರೌಢ ಶಾಲೆ ಮಂಜೂರು ಮಾಡಿದ್ದಾರೆ. ಸಿಎಸ್ಆರ್ ಅನುದಾನದಡಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ನೂತನ ಕೊಠಡಿಗಳನ್ನು ಶೀಘ್ರದಲ್ಲಿ ನಿರ್ಮಿಸಲಾಗುವದು. ಪಾಲಕರು ತಮ್ಮ ಮಕ್ಕಳನ್ನು ಪ್ರತಿ ದಿನ ಶಾಲೆಗೆ ಕಳಿಸಬೇಕು ಎಂದರು.
ಸಚಿವರ ಆಪ್ತ ಸಹಾಯಕ ಸಂತೋಷ ಲೋಕುರೆ ಮಾತನಾಡಿ, ಈ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಸಚಿವರ ಪರಿಶ್ರಮದಿಂದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ವರ್ಷ ಒಂಬತ್ತನೇ ತರಗತಿಯನ್ನು ಪ್ರಾರಂಭಿಸಲಾಗಿದೆ. ಹೆಣ್ಣು ಮಕ್ಕಳು ತಪ್ಪದೇ ಪ್ರತಿ ದಿನ ಶಾಲೆಗೆ ಬರಬೇಕು. ಮದ್ಯದಲ್ಲಿ ಶಾಲೆ ಬಿಡಬೇಡಿ, ಪಾಲಕರು ಕೂಡಾ ಬಾಲ್ಯ ವಿವಾಹಕ್ಕೆ ಆಸ್ಪದ ಕೊಡಬೇಡಿ ಎಂದರು.
ಆಪ್ತ ಕಾರ್ಯದರ್ಶಿ ಬಿ. ಎನ್. ಭೋಸಲೆ ಮಾತನಾಡಿ ಮಕ್ಕಳು ಹೆಚ್ಚು ಆಸಕ್ತಿ ವಹಿಸಿ ಉತ್ತಮವಾಗಿ ಓದಬೇಕು. ಶಿಕ್ಷಕರು ಕೂಡಾ ಉತ್ತಮವಾಗಿ ಕಲಿಸಬೇಕು, ಪಾಲಕರು ಮಕ್ಕಳ ವಿದ್ಯೆಗೆ ಹೆಚ್ಚು ಮಹತ್ವ ಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಪ್ರಭು ಎಚ್. ಬಿರಾದಾರ, ಎಸ್ಡಿಎಂಸಿ ಅಧ್ಯಕ್ಷ ಅಬ್ಬಾಸಲಿ ಜಮಾದಾರ, ಮುಖ್ಯೋಪಾಧ್ಯಾಯ ಪಿ. ಡಿ. ದೂಡಿಹಾಳ, ಆರ್.ಎಸ್. ನಾಯ್ಕೋಡಿ ,ಆರ್.ಪಿ.ಮುಂಡಗನೂರ, ಪಿ.ಯು.ಕುಲಕರ್ಣಿ, ಬಿ.ಪಿ. ಕಾಂಬಳೆ, ಎಚ್.ಎಸ್. ಯಕ್ಕುಂಡಿ, ಬಿ.ಎ.ಬಡಿಗೇರ ಇದ್ದರು.