ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಮಾರುಕಟ್ಟೆ ಪ್ರದೇಶ ಮಳೆ ನೀರಿನಿಂದ ಆವೃತ್ತವಾಗಿ ಗ್ರಾಹಕರು ವ್ಯಾಪಾರ ಮಳಿಗೆಗಳಿಗೆ ತೆರಳಲು ಪ್ರಯಾಸ ಪಡುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣದ ಎಡ, ಬಲಗಳಲ್ಲಿ ನಿಮಾಣವಾದ ನೂತನ ಮಾರುಕಟ್ಟೆ ಪ್ರದೇಶ ಅಕ್ಷರಶ ಮಳೆ ನೀರಿನಿಂದ ಆವೃತ್ತವಾಗಿ ಕೆಸರಿನ ಗದ್ದೆಯಂತಾಗಿದೆ. ತಾಲ್ಲೂಕು ಕೇಂದ್ರ ಹಾಗೂ ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶದ ವ್ಯಾಪಾರ ಮಳಿಗೆಗಳಿಗೆ ಕೊಳ್ಳಲು ಬರುವಂತ ಗ್ರಾಹಕರು ಮಳೆ ಬರುವುದೇ ತಡ ನಡೆಯಲು ಹರಸಾಹಸ ಪಡುವಂತಾಗಿದೆ. ಈ ಬಗ್ಗೆ ಗಣ್ಯವ್ಯಾಪಾರಿ ಶಿವಾನಂದ ಅತನೂರ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಮಳೆಗಾಲ ಬರುವುದೇ ತಡ ನೂತನ ಮಾರುಕಟ್ಟೆ ಪ್ರದೇಶ ಕೆಸರಿನಿಂದ ತುಂಬಿ ಗ್ರಾಹಕರ ಪ್ರವೇಶಕ್ಕೆ ಅವಕಾಶವಿಲ್ಲದಂತಾಗುತ್ತದೆ. ಇನ್ನೂ ದ್ವಿಚಕ್ರ ವಾಹನಗಳಲ್ಲಿ ಬರಬೇಕೆಂದರೆ ಅದು ಸಹ ಜಾರುತ್ತಲೇ ತೆರಳುತ್ತದೆ. ಪ್ರತಿ ವರ್ಷ ಮಳೆ ನೀರು ಎಲ್ಲೆಂದರಲ್ಲಿಯೇ ನಿಲ್ಲುವುದು ವ್ಯಾಪಾರಿಗಳು ಹಾಗೆಯೇ ಅಂಗಡಿಗಳನ್ನು ತೆರೆಯುವುದು ನಡೆದಿದ್ದು, ಗ್ರಾಹಕರು ಸಹ ಅನಿವಾರ್ಯವಾಗಿ ನಡೆದು ಬಂದು ವ್ಯಾಪಾರ ಮಾಡುವಂತಾಗಿದೆ.
ನೂತನ ತಾಲ್ಲೂಕು ಕೇಂದ್ರದ ಈ ಮಾರುಕಟ್ಟೆ ಪ್ರದೇಶ ಮಳೆಗಾಲದಲ್ಲಿ ಮಾತ್ರ ಮಲೀನ ನೀರಿನಿಂದ ಆವೃತ್ತವಾಗಿ ಪಟ್ಟಣದ ಸ್ಥಳೀಯ ಆಡಳಿತದ ವೈಖರಿಯನ್ನು ಪ್ರಶ್ನಿಸುವಂತಿದೆ. ಮಾರುಕಟ್ಟೆಯ ಎಲ್ಲ ನಿವೇಶನಗಳ ಹಂಚಿಕೆಯ ಪೂರ್ವವೇ ಸುಸಜ್ಜಿತ ರಸ್ತೆ ನಿರ್ಮಿಸುವುದು ಮಾಲೀಕರ ಕೆಲಸ. ನಂತರ ಎಲ್ಲ ಸೌಲಭ್ಯಗಳು ಇವೆಯೋ? ಹೇಗೆ ಎಂದು ಪರಿಶೀಲಿಸಿ ಅಲ್ಲಿ ಮಾರಾಟಕ್ಕೆ ಅವಕಾಶ ನೀಡುವುದು ಸ್ಥಳೀಯ ಆಡಳಿತದ ಜವಾಬ್ದಾರಿ. ಆದರೆ ಇಲ್ಲಿ ಯಾವುದೇ ಸರಿಯಾಗಿ ನಿರ್ವಹಣೆಯಾಗದ ಕಾರಣ ಇಂದು ಇಲ್ಲಿ ಸಿ.ಸಿ ರಸ್ತೆಯಂತ ಸುಸಜ್ಜಿತ ಮಾರ್ಗ ನಿರ್ಮಾಣವಾಗದ ಕಾರಣ ಇಡೀ ಮಾರುಕಟ್ಟೆ ಪ್ರದೇಶ ಕಲುಷಿತಗೊಳ್ಳಲು ಕಾರಣವಾಗಿದೆ ಎಂದು ಮಾಹಿತಿ ನೀಡುತ್ತಾರೆ.
ಮಾರುಕಟ್ಟೆ ಪ್ರದೇಶದ ಮಳಿಗೆಗಳ ಮಾಲೀಕರಾದ ನಾವು ಪ್ರತಿವರ್ಷ ತೆರಿಗೆ ಭರಿಸುತ್ತೇವೆ. ಅದಕ್ಕಾಗಿ ಪಟ್ಟಣ ಪಂಚಾಯಿತಿ ಕೂಡಲೇ ಮಾರುಕಟ್ಟೆ ಪ್ರದೇಶದಲ್ಲಿ ಸುಸಜ್ಜಿಯ ರಸ್ತೆ ನಿರ್ಮಾಣ ಮಾಡಬೇಕು. ಇದು ಅವರ ಅವರ ಕಾರ್ಯ ಎಂದು ಆಗ್ರಹಿಸುತ್ತಾರೆ ವೈದ್ಯ ಸತೀಶ ರಾಠೋಡ, ವ್ಯಾಪಾರಿಗಳಾದ ಶಾಂತು ರಾಠೋಡ, ರಾಜಕುಮಾರ ರಾಠೋಡ, ಸಯ್ಯದ ಮಳಖೇಡ.