ವಿಜಯಪುರದ ಅಂಗನವಾಡಿ, ವಸತಿ ಶಾಲೆ, ಹಾಸ್ಟೆಲ್ಗಳಿಗೆ ದಿಡೀರ್ ಭೇಟಿ ನೀಡಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಅಂಗನವಾಡಿ ಹಾಸ್ಟೆಲ್, ವಸತಿ ಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಅಧಿಕಾರಿಗಳೊಂದಿಗೆ ದಿಡೀರ್ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರ ಸಂಗಮೇಶ ಬಬಲೇಶ್ವರ ಅವರು ಎಸ್ ಎಸ್ ಎಲ್ ಸಿ ಮಕ್ಕಳೊಂದಿಗೆ “ಭಯಮುಕ್ತವಾಗಿ ಪರೀಕ್ಷೆ ಎದುರಿಸುವುದು ಹೇಗೆ? ಎನ್ನುವ ಕುರಿತು ಸಂವಾದ ನಡೆಸಿದರು.
ಶಾಲೆ ಅಂಗನವಾಡಿ ವಸತಿ ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಿಸುವಂತೆ ಹಾಗೂ ಮಕ್ಕಳ ಸ್ನೇಹಿಯಾದ ವಾತಾವರಣ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಂಡುಬಂದ ನ್ಯೂನ್ಯತೆಗಳ ಪಟ್ಟಿ ಮಾಡಿದ ಅವರು ಭೇಟಿ ನೀಡಿದ ಸ್ಥಳದಿಂದಲೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಗತ್ಯ ಕ್ರಮ ಕೈಗೊಂಡು ವ್ಯವಸ್ಥೆ ಸರಿಪಡಿಸುವಲ್ಲಿ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಿ, ಮಕ್ಕಳ ಹಿತ ದೃಷ್ಟಿಯಿಂದ ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೌಹಾನ್, ವಿಜಯಪುರ ತಹಸೀಲ್ದಾರ್ ಪ್ರಶಾಂತ್ ಚನಗೊಂಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ, ಬಿಸಿಎಂ ಇಲಾಖೆಯ ಉಪನಿರ್ದೇಶಕ ಪೋತದಾರ್, ಅಲ್ಪಸಂಖ್ಯಾತ ಇಲಾಖೆ ಉಪ ನಿರ್ದೇಶಕ ಪ್ರಶಾಂತ್ ಪೂಜಾರಿ, ಶಿಕ್ಷಣ ಇಲಾಖೆಯ ದಳವಾಯಿ ಹಾಗೂ ಜಿಲ್ಲಾಮಟ್ಟದ ಹಾಗೂ ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

ನಿರ್ದಿಷ್ಠ ಮಾರ್ಗ ಬದಲಿಸಿದ ಬಬಲೇಶ್ವರ
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ್ ಬಬಲೇಶ್ವರ ಅವರನ್ನು ಅಧಿಕಾರಿಗಳು ನಿರ್ದಿಷ್ಠ ಕೇಂದ್ರಗಳಿಗೆ ಕರೆದುಕೊಂಡು ಹೊರಟಾಗ ಬಬಲೇಶ್ವರ ಅವರು ಆ ಕಡೆಗೆ ತೆರಳದೆ ಕೆಲವು ಕಡೆ ಮಾರ್ಗ ಬದಲಿಸಿ ಅನಿರೀಕ್ಷಿತವಾಗಿ ಅಂಗನವಾಡಿ ಮತ್ತು ಶಾಲೆಗಳಿಗೆ ಭೇಟಿ ನೀಡಿದ ಪ್ರಸಂಗ ಜರುಗಿತು.