ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಕಲಕೇರಿಯಿಂದ ಸುತ್ತಮುತ್ತಲಿನ ಯಾವುದೇ ಗ್ರಾಮಗಳಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅವುಗಳನ್ನು ಅಭಿವೃದ್ಧಿಪಡಿಸುವದು ಅನಿವಾರ್ಯವಾಗಿದ್ದು, ಇದೀಗ ಗ್ರಾಮದ ಜೋಡುಗುಡಿಯಿಂದ ಕೆಇಬಿ ವರೆಗಿನ ಸುಮಾರು ಒಂದು ಕೀ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗುತ್ತಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಬ. ಪಾಟೀಲ, ಕುದರಿಸಾಲವಾಡಗಿ ಅವರು ಹೇಳಿದರು.
೨೦೨೫-೨೬ನೇ ಸಾಲಿನ ೩೦೫೪ ರಸ್ತೆ ಸುಧಾರಣೆ ಯೋಜನೆ ಅಡಿಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ತಿಳಗೂಳ ಕ್ರಾಸ್ ಕಲಕೇರಿ-ಅಸ್ಕಿ ರಸ್ತೆ ಕಿ.ಮೀ. ೨.೪ ರಿಂದ ೩.೧ರ ವರೆಗೆ ಅಂದಾಜು ೩ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಯ ಭೂಮಿಪೂಜಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ವೇಳೆ ಗ್ರಾಮದ ಬಸ್‌ಸ್ಟ್ಯಾಂಡ ಮತ್ತು ಆಸ್ಪತ್ರೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಕಲಕೇರಿ ಹಾಗೂ ಕೋರವಾರ ಗ್ರಾಮಗಳನ್ನು ಹೋಬಳಿ ಮಾಡುವ ನಿಟ್ಟಿನಲ್ಲಿ ನನ್ನ ಪ್ರಯತ್ನಗಳು ನಿರಂತರವಾಗಿದ್ದು, ಸಾಧ್ಯವಾದಷ್ಟು ಈ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ದೃಷ್ಟಿಯಿಂದ ನಿರಂತರವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು.
ಈ ವೇಳೆ ಕಲಕೇರಿ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು, ಗ್ರಾಪಂ ಅಧ್ಯಕ್ಷ ರಾಜಅಹ್ಮದ ಸಿರಸಗಿ, ಎಇಇ ಅರುಣಕುಮಾರ ವಡಗೇರಿ, ಎಇ ಸುಬಾಸ ಸಜ್ಜನ, ಬಸವರಾಜ ಚಿಕ್ಕಮಠ, ರಮೇಶ ಅಡಕಿ, ಈರಪ್ಪ ಝಳಕಿ, ವಿಶ್ವನಾಥ ಸಬರದ, ಕಾಸೀಮ ನಾಯ್ಕೋಡಿ, ಮಹ್ಮದ ಉಸ್ತಾದ, ಆನಂದ ಅಡಕಿ, ಸುಧಾಕರ ಅಡಕಿ, ಹಣಮಂತ ವಡ್ಡರ, ಶಿವರಾಜ ದೊರೆಗೋಳ, ಸುನೀಲ ಪಾಟೀಲ, ಪ್ರವೀಣ ಜಗಶೆಟ್ಟಿ, ರಮೇಶ ಹೆಂಡಿ ಸೇರಿದಂತೆ ಇತರರು ಇದ್ದರು.