ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಟಗಳು ಮಕ್ಕಳ ಶಾರೀರಿಕ ಮಾನಸಿಕ ಆರೋಗ್ಯ ವನ್ನು ಕಾಪಾಡುವಲ್ಲಿ ತುಂಬಾ ಸಹಕಾರಿ. ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ ಹೇಳಿದರು.
ಜಿಲ್ಲೆಯ ಇಂಡಿ ತಾಲ್ಲೂಕಿನ ಹಡಲಸಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಝಳಕಿ ವೃತ್ತದ ವ್ಯಾಪ್ತಿಯ ವಲಯ ಮಟ್ಟದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳ ಕ್ರೀಡಾ ಆಸಕ್ತಿ ಮೂಡಿಸುವ ಕಾರ್ಯವನ್ನು ಶಾಲಾ ಹಂತದಲ್ಲಿ ಪ್ರೋತ್ಸಾಹ ನೀಡಬೇಕು. ಜೊತೆಗೆ ಆರೋಗ್ಯ ದಿಂದ ಇರಲು ಆಟಗಳು ತುಂಬಾ ಸಹಕಾರಿ ಎಂದರು.
ಚಡಚಣ ಶಿಕ್ಷಕರ ಸೊಸೈಟಿ ಅಧ್ಯಕ್ಷ ಎಸ್ ಎಸ್ ಪಾಟೀಲ ಮಾತನಾಡಿ, ದೇಶಿಯ ಆಟಗಳನ್ನು ಸಂರಕ್ಷಣೆ ಮಾಡಿ ಅವುಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಶಿಕ್ಷಣ ಪ್ರೇಮಿ ಸುಭಾಷಚಂದ್ರ ಬಿರಾದಾರ ಮಾತನಾಡಿ, ವಿದ್ಯಾಭ್ಯಾಸ ಜೊತೆಗೆ ಮಕ್ಕಳನ್ನು ಮೋಬೈಲ್ ಗೀಳಿನಿಂದ ಹೊರತರುವ ಶಕ್ತಿ ಆಟಗಳಿಗೆ ಇದೆ ಎಂದರು.
ಕ್ರೀಡಾಜ್ಯೋತಿಯನ್ನು ಭೂ ದಾನಿ ಸಂತೋಷ ಗೌಡ ಪಾಟೀಲ ಪ್ರಜ್ವಲನ ಮಾಡಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕಾಂತು ರಿಸಾಲ್ದಾರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಿ. ಡಿ. ಓ. ಸಿದ್ದಣ್ಣ ಲೋಣಿ, ಶಿಕ್ಷಕರ ಸಂಘಟನೆಯ ಎ. ಎಸ್. ಸೊನಗಿ, ಬಿ, ಎಸ್. ಮಜ್ಜಗಿ, ಗುರು ಜೇವೂರ, ಬಸವಂತ ಉಮರಾಣಿ, ಎಸ್. ಬಿ. ಪಾಟೀಲ, ಆರ್ ಎನ್ ಬಗಲಿ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮದ ಶಿಕ್ಷಣ ಪ್ರೇಮಿಗಳು, ಹಿರಿಯರು, ವಿವಿಧ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಮುಖ್ಯ ಗುರು ಎಚ್. ಆರ್ ಪೂಜಾರಿ ಸ್ವಾಗತಿಸಿದರು. ಎ. ಎಸ್. ವಾಡಿ ಗುರುಗಳು ನಿರೂಪಿಸಿದರು. ವೆಂಕಟೇಶ್ ಚವಾಣ್ ವಂದಿಸಿದರು.