ಅಂಚೆ ಕಛೇರಿಯಲ್ಲಿ ಕೆಟ್ಟು ಹೋದ ಬ್ಯಾಟರಿಗಳು | ಅಸಹಕಾರ ಧೋರಣೆಯ ಸಿಬ್ಬಂದಿ | ಮೂಲಭೂತ ಸೌಕರ್ಯಗಳ ಕೊರತೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸ್ಥಳೀಯ ಮುಖ್ಯ ಅಂಚೆ ಕಛೇರಿಯಲ್ಲಿ ಬ್ಯಾಟರಿಗಳು ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ಸಾರ್ವಜನಿಕರು ಯಾವುದೇ ಕೆಲಸದ ನಿಮಿತ್ಯವಾಗಿ ಅಂಚೆ ಕಛೇರಿಗೆ ಹೋದರೆ, ವಿದ್ಯುತ್ ಇದ್ದರೆ ಮಾತ್ರ ಅವರ ಕೆಲಸ ಕಾರ್ಯಗಳು ಆಗುತ್ತವೆ.
ಏಕೆಂದರೆ ಕಚೇರಿಯಲ್ಲಿ ಜನರೇಟರ್ ಇಲ್ಲದ ಕಾರಣ ಕಂಪ್ಯೂಟರ್, ಪ್ರಿಂಟರ್ ಕಾರ್ಯನಿರ್ವಹಿಸುವದಿಲ್ಲ. ನಮಗೆ ತುರ್ತು ಕೆಲಸ ಇದೆ ಎಂದು ಸಾರ್ವಜನಿಕರು ಹೇಳಿದರೆ, ಅಲ್ಲಿನ ಸಿಬ್ಬಂದಿಯ ಉತ್ತರ ಮಾತ್ರ ವಿದ್ಯುತ್ ಇಲ್ಲ.
ವಿದ್ಯುತ್ ಬರೋವರೆಗೂ ಅಲ್ಲಿ ಕುಳಿತುಕೊಳ್ಳಲಿಕ್ಕೆ ಆಸನದ ವ್ಯವಸ್ಥೆ ಕೂಡಾ ಇಲ್ಲ. ಗ್ರಾಹಕರು ಕಸದ ರಾಶಿ ತುಂಬಿರುವ, ಸ್ವಚ್ಛತೆ ಇಲ್ಲದ ನೆಲದ ಮೇಲೆ ಕುಳಿತುಕೊಳ್ಳಬೇಕು. ಇಲ್ಲಿ ಗ್ರಾಹಕರಿಗೆ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವುದು ಎದ್ದು ಕಾಣುತ್ತದೆ. ಮೂತ್ರಾಲಯ ಇಲ್ಲದಿರುವುದು ಕೇಳಿದರೆ ಹಳ್ಳದ ದಂಡೆಗೆ ಹೋಗಿರಿ ಎಂಬ ಉಡಾಫೆ ಉತ್ತರ ಮಾತ್ರ ಸಿಗುತ್ತದೆ.
ಇಲ್ಲಿ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಸರಿಯಾದ ಮಾಹಿತಿ ನೀಡದೆ ಕಳಿಸುತ್ತಾರೆ.
ಈ ಅಂಚೆ ಕಚೇರಿ ಕೇಂದ್ರ ಸರಕಾರದ ಬ್ಯಾಂಕ್ ಮಾರ್ಗಸೂಚಿ ನಿಯಮಾವಳಿಗಳನ್ನು ಪಾಲಿಸದೆ ಇರುವದು ಎದ್ದು ಕಾಣುತ್ತದೆ.
ಇಂತಹ ಅವ್ಯವಸ್ಥೆಯ ಆಗರವಾಗಿರುವ ಪಟ್ಟಣದ ಮುಖ್ಯ ಅಂಚೆ ಕಛೇರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಗ್ರಾಹಕರ ಕೆಲಸಗಳನ್ನು ಬೇಗನೆ ಮಾಡಿಕೊಡಬೇಕು ಮತ್ತು ಕೆಟ್ಟು ಹೋಗಿರುವ ಜನರೇಟರ್, ಬ್ಯಾಟರಿಗಳ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವುಗಳನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಬಾಕ್ಸ್
ಅಸಹಕಾರ ಧೋರಣೆಯ ಸಿಬ್ಬಂದಿ
ಕೇಂದ್ರ ಸರಕಾರ ಕೋಟ್ಯಾಂತರ ರೂ. ಖರ್ಚುಮಾಡಿ ಎಲ್ಲ ಅಂಚೆ ಕಛೇರಿಗಳಿಗೆ ಯು.ಪಿ.ಎಸ್. ಹಾಗೂ ಜನರೇಟರ್ ವ್ಯವಸ್ಥೆ ಕಲ್ಪಸಿದ್ದಾರೆ. ಆದರೆ ಪಟ್ಟಣದ ಅಂಚೆ ಕಛೇರಿಯಲ್ಲಿ ಜನರೇಟರ್ ಹಾಗೂ ಬ್ಯಾಟರಿಗಳು ಕೆಟ್ಟು ಹೋದರೂ ಕೂಡ ಇಲ್ಲಿನ ಸಿಬ್ಬಂದಿ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನು ಸಾರ್ವಜನಿಕರು ಅಲ್ಲಿಯೇ ಕಾಯ್ದು ಕುಳಿತಿದಿದ್ದರೂ ಕೂಡ ವಿದ್ಯುತ್ ಬಂದಿದೆ ಎಂದು ಹೇಳಿದಾಗ ಸಧ್ಯ ನಮ್ಮ ಊಟದ ಸಮಯ. ಇನ್ನು ೧ ಗಂಟೆ ಬಿಟ್ಟು ಬನ್ನಿ ಎಂದು ಹೇಳುತ್ತಾರೆ. ವಯೋವೃದ್ಧರು ಬಂದರೆ ಕೈಗೆ ಫಾರ್ಮ ಕೊಟ್ಟು ಇದನ್ನು ತುಂಬಿ ಕೊಡಿ ಎಂದು ಹೇಳುತ್ತಾರೆ. ಇದರಿಂದಾಗಿ ವಯೋವೃದ್ಧರಿಗೆ ಫಾರ್ಮ ತುಂಬಿ ಕೊಡುವವರು ಯಾರೂ ಸಿಗದಿದ್ದರೆ ಇವರ ಗತಿ ಆ ದೇವರೆ ಬಲ್ಲ.