ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಎನ್‌ಟಿಪಿಸಿ ಕೂಡಗಿಯಿಂದ ಆಲಮಟ್ಟಿ ರಸ್ತೆಗೆ ಹೊಂದಿಕೊಂಡು ಬರುವ ಗದಗ ಹುಟಗಿ ರೇಲ್ವೇ ಮಾರ್ಗಕ್ಕೆ ತೆಲಗಿ ಸಮೀಪ ಹೊಸದಾಗಿ ರೇಲ್ವೇ ಹಳಿಮಾರ್ಗ ಕೆಳಗಡೆ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿತು.
ತಾಲೂಕಿನ ಕವಲಗಿ ಗ್ರಾಮದಿಂದ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮದ್ಯದಲ್ಲಿ ಬರುವ ರೇಲ್ವೇ ಮಾರ್ಗದ ಮಾನವ ಕಾವಲುಗಾರ ತಡೆಗೇಟ್ ಬದಲಾಗಿ ಹಳಿ ಕೆಳಬಾಗದಲ್ಲಿ ಸೇತುವೆ ನಿರ್ಮಿಸಲು ದಕ್ಷೀಣ ಮದ್ಯ ರೇಲ್ವೇ ಇಲಾಖೆ ಮಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸಲು ಸಂಸದ ರಮೇಶ ಜಿಗಜಿಣಗಿಯವರ ಸತತ ಪ್ರಯತ್ನವೇ ಕಾರಣ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಸೇತುವೆ ಕಾಮಗಾರಿಗೆ ಅಂದಾಜು ಎಂಟು ಕೋಟಿ ವೆಚ್ಚವಾಗಲಿದೆ. ಈ ಸೇತುವೆ ನಿರ್ಮಾಣವಾಗುವದರಿಂದ ಬೀಳಗಿ ಬಾರಖೇಡ ರಾಜ್ಯ ಹೆದ್ದಾರಿಯಲ್ಲಿ ಕಬ್ಬು ಹೊತ್ತು ಸಾಗಿಸುವ ಮತ್ತು ಎತ್ತರದ ಸಗಟು ತೆಗೆದುಕೊಂಡು ಬರುವ ವಾಹನಗಳಿಗೆ ಬಹಳ ಅನುಕೂಲವಾಗುತ್ತದೆ. ಕಾರಣ ತೆಲಗಿ ರೇಲ್ವೇ ನಿಲ್ದಾಣದ ಹತ್ತೀರವಿರುವ ಕೆಳ ಸೇತುವೆ ಕಿರಿದಾಗಿದ್ದರಿಂದ ಕಬ್ಬಿನ ಟ್ಯಾಕ್ಟರ ಲಾರಿ ಮತ್ತು ಎತ್ತರದ ವಾಹನಗಳಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಈ ಕೆಳಮಾರ್ಗದ ಅನತಿದೂರದಲ್ಲಿಯೇ ಮತ್ತೂಂದು ಹೊಸ ಕೆಳಮಾರ್ಗ ನಿರ್ಮಾಣವಾಗುತ್ತಿರುವದು ಈ ಬಾಗದ ರೈತರಿಗೆ ಸಾರ್ವಜನಿಕರಿಗೆ ವರದಾನವೇ ಸರಿ ಎಂದರು.
ಈ ಸಂದರ್ಭದಲ್ಲಿ ರೇಲ್ವೇ ಇಲಾಖೆ ಅಧಿಕಾರಿ ಎಮ್.ಎಮ್. ಮುಲ್ಲಾ ಗುತ್ತಿಗೆದಾರ ಮೇಹುಲ ಜೈನ್, ತೆಲಗಿ ಗ್ರಾಪಂ ಅಧ್ಯಕ್ಷ ಅರವಿಂದ ಕೊಪ್ಪದ, ಗೊಳಸಂಗಿ ಗ್ರಾಪಂ ಅಧ್ಯಕ್ಷ ರಾವತಪ್ಫ ಸೀಮಿಕೇರಿ, ಬೀಮನಗೌಡ ಅಂಗಡಗೇರಿ, ಸಿದ್ದನಗೌಡ ಅಂಗಡಗೇರಿ, ಜಗದೀಶ ಗಾಣಿಗೇರ, ಭೂಮಿ ಕೊಟ್ಟ ಬಸಪ್ಪ ಆಸಂಗಿ, ಚಿನ್ನಪ್ಪ ಗಿಡ್ಡಪ್ಪಗೋಳ ಅನೇಕರು ಉಪಸ್ದಿತರಿದ್ದರು.