೧೯೬೪ರಲ್ಲಿ ಪ್ರಾರಂಭವಾದ ಬ್ಯಾಂಕು ೬ ದಶಕಗಳಲ್ಲಿ ರೂ.೧೦೮ಕೋಟಿ ಠೇವಣಿ ಸಂಗ್ರಹ | ರೂ.೭೨ಕೋಟಿ ಸಾಲ ವಿತರಣೆ | ಅಧ್ಯಕ್ಷ ಶರಣಪ್ಪ ವಾರದ ವಿವರಣೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ೬೦ ವರ್ಷಗಳನ್ನು ಪೂರೈಸಿದ ಪ್ರಯುಕ್ತ ಷಷ್ಠಿಪೂರ್ತಿ ಹಾಗೂ ೬೧ನೆಯ ವರ್ಷದ ವಾರ್ಷಿಕ ಮಹಾಸಭೆಯನ್ನು ಸೆ.೨೦ರಂದು ಅನುಗ್ರಹ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶರಣಪ್ಪ ವಾರದ ಹೇಳಿದರು.
ಸಿಂದಗಿ ಪಟ್ಟಣದ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕಿನ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಕೊಳ್ಳಲಿದ್ದು, ಉದ್ಘಾಟನೆಯನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ನೆರವೇರಿಸಲಿದ್ದಾರೆ.
೧೯೬೪ರಲ್ಲಿ ಪ್ರಾರಂಭವಾದ ಬ್ಯಾಂಕು ೬ ದಶಕಗಳಲ್ಲಿ ರೂ.೧೦೮ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ.೭೨ಕೋಟಿ ಸಾಲ ವಿತರಿಸಿದ್ದು, ಒಟ್ಟು ೬ ಶಾಖೆಗಳನ್ನು ಹೊಂದಿ ಎಲ್ಲ ಶಾಖೆಗಳು ಸಹಕಾರಿ ರಂಗದಲ್ಲಿ ಎ ಗ್ರೇಡ್‌ನಲ್ಲಿ ಪ್ರಗತಿಯತ್ತ ಸಾಗಲು ನಿರ್ದೇಶಕರ, ವ್ಯವಸ್ಥಾಪಕರ, ಸಿಬ್ಬಂದಿ ವರ್ಗದ ಸಹಕಾರ ಹಾಗೂ ಪರಿಶ್ರಮವೇ ಕಾರಣವೆಂದ ಅವರು, ಸದಸ್ಯರುಗಳಿಗೆ ಅತೀ ಹೆಚ್ಚಿನ ಡಿವೆಡೆಂಟ್ ಪಾವತಿಸಲಾಗಿದ್ದು, ೮೦೭೯ ಸದಸ್ಯರಿಂದ ರೂ.೫.೧೬ಕೋಟಿ ಷೇರು ಬಂಡವಾಳ ಸಂಗ್ರಹವಾಗಿದೆ. ಬ್ಯಾಂಕಿನ ಸ್ವಂತ ಬಂಡವಾಳವು ರೂ.೧೬.೯೧ಕೋಟಿ, ರೂ.೧೦೭.೯೭ಕೋಟಿ ಠೇವಣಿಗಳಿದ್ದು, ಒಟ್ಟು ರೂ.೭೧.೯೨ಕೋಟಿ ಸಾಲವನ್ನು ನೀಡಲಾಗಿದೆ. ರೂ.೧೦೭.೭೦ಕೋಟಿ ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ರೂ.೧.೧ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ.೯ರಷ್ಟು ಲಾಭಾಂಶ ಹೊಂದಿದೆ. ೫.೫ ಎನ್.ಪಿ.ಎ ಸಾಲವಿದ್ದು, ಬರುವ ಆರ್ಥಿಕ ವರ್ಷದಲ್ಲಿ ಶೂನ್ಯ ಪ್ರಮಾಣಕ್ಕೆ ಇಳಿಸುವ ಗುರಿ ಹೊಂದಲಾಗಿದ್ದು, ಎಲ್ಲ ಶಾಖೆಗಳು ಲಾಭಂಶದಲ್ಲಿವೆ. ಬ್ಯಾಂಕು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕಿನ ಸಿಬ್ಬಂದಿಗಳಿಗೆ ಹುಬ್ಬಳ್ಳಿ ಮತ್ತು ಬೆಂಗಳೂರು ನಗರಗಳಲ್ಲಿ ಹಮ್ಮಿಕೊಳ್ಳಲಾದ ಶಿಬಿರಗಳಲ್ಲಿ ತರಬೇತಿ ಕೊಡಿಸಿದ್ದರಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸುವಲ್ಲಿ ಸಹಕರಿಯಾಗಿದೆ. ಸತತ ೫ ವರ್ಷ ವಿಜಯಪುರ ಜಿಲ್ಲೆಯ ಡಿಸಿಸಿ ಬ್ಯಾಂಕು, ನಮ್ಮ ಬ್ಯಾಂಕನ್ನು ಜಿಲ್ಲೆಯ ಅತ್ಯುತ್ತಮ ಸಹಕಾರಿ ಬ್ಯಾಂಕ್ ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದು ಹೆಮ್ಮೆಯ ಸಂಗತಿ..
ಸದ್ಯ ೫೦ಲಕ್ಷ ಮಿತಿ ಇರುವ ಸಾಲದ ಮೊತ್ತವನ್ನು ಮುಂಬರುವ ದಿನಗಳಲ್ಲಿ ರೂ.೧ಕೋಟಿಗೆ ಏರಿಸಿ, ಆಕರಿಸಲಾಗುತ್ತಿರುವ ಬಡ್ಡಿ ದರದಲ್ಲಿ ಗಣನೀಯ ಇಳಿಕೆ ಮಾಡಿ ಗ್ರಾಹಕ-ಸ್ನೇಹಿ ಸಹಕಾರಿ ಸಂಘವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸಿಂದಗಿ, ದೇವರ ಹಿಪ್ಪರಗಿಗಳಲ್ಲಿ ಸ್ವಂತ ಜಾಗಗಳಿದ್ದು, ಅತೀ ಶೀಘ್ರದಲ್ಲೇ ದೇವರಹಿಪ್ಪರಗಿ ಪಟ್ಟಣದಲ್ಲಿ ಕಟ್ಟಡ ಪ್ರಾರಂಭಿಸಲಾಗುವುದಲ್ಲದೇ ವಿಜಯಪುರ ನಗರದಲ್ಲಿ ಅಲ್ಲಿನ ಗ್ರಾಹಕರಿಗೂ ಅನುಕೂಲವಾಗುವ ದೃಷ್ಟಿಯಿಂದ ಶಾಖೆಯನ್ನು ಪ್ರಾರಂಭಿಸಲಾಗುವುದು ಎಂದರು.
ಈ ವೇಳೆ ಉಪಾಧ್ಯಕ್ಷ ಪ್ರಕಾಶ ಕೋರಿ, ನಿರ್ದೇಶಕರಾದ ಎಸ್.ಎಸ್.ಸಂಗಮ, ಎಸ್.ಎಸ್. ವಡ್ಡೋಡಗಿ, ಸುರೇಶ ಜೋಗುರ, ಆರ್.ಎಸ್.ನಾಗೂರ, ಮಹಾದೇವಪ್ಪ ಸಿಂದಗಿ, ನೀಲಕಂಠ ಗುಣಾರಿ, ಬಿ.ಬಿ.ಕಮತಗಿ, ಸಿಇಒ ಬಿ.ಬಿ.ದೇವೂರ, ಸಿಬ್ಬಂದಿಗಳಾದ ಸುಭಾಸ ಅಳಗುಂಡಗಿ, ಎಸ್.ಎಸ್.ಪಟ್ಟಣಶೆಟ್ಟಿ, ಈರಣ್ಣ ಕುಮಟಗಿ ಸೇರಿದಂತೆ ಇತರ ಸಿಬ್ಬಂದಿ ಇದ್ದರು.