ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಾದ್ಯಂತ ಇರುವ ಶಾಲಾ-ಕಾಲೇಜ್ ಆವರಣದ ೧೦೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣಾ ಕಾರ್ಯಕ್ರಮದ ೨೦೨೫-೨೬ನೇ ಸಾಲಿನ ಎರಡನೇ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯವರು ಕೊಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ತಂಬಾಕು ಉತ್ಪನ್ನಗಳ ಉಪಯೋಗದಿಂದ ದುಷ್ಪರಿಣಾಮ ಹಾಗೂ ಕಾಯ್ದೆಯ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕೆ ತನಿಖಾ ದಳಗಳನ್ನು ರಚಿಸಿಕೊಂಡು ಕ್ರೀಯಾಶೀಲತೆಯಿಂದ ಕಾಲ ಕಾಲಕ್ಕೆ ದಾಳಿ ನಡೆಸಬೇಕು. ಎಲ್ಲ ಶಾಲೆಗಳಲ್ಲಿ ಆಗಾಗ ಪಾಲಕರ ಸಭೆ ಜರುಗಿಸಿ, ಮಾಹಿತಿ ನೀಡಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ, ಅರಿವು ಮೂಡಿಸುವಂತೆ ಅವರು ಸೂಚಿಸಿದರು.
ಶಾಲಾ ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯ ಮಾರ್ಗಸೂಚಿಗಳನ್ನು ದಾಖಲಿಸಬೇಕು. ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸುವ ಅಂಗಡಿಗಳ ಮಾಲೀಕರಿಗೆ ಒಂದು ಬಾರಿ ದಂಡ ವಿಧಿಸಿ, ಸೂಕ್ತ ತಿಳುವಳಿಕೆ ನೀಡಿ,ಇದು ಪುನರಾವರ್ತಿವಾಗಿರುವುದು ಕಂಡು ಬಂದರೆ ಟ್ರೇಡ್ ಲೈಸೆನ್ಸ್ ನ್ನು ರದ್ಧುಪಡಿಸಲು ಗ್ರಾಮ ಪಂಚಾಯತಿ ಹಾಗೂನಗರ ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು. ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋಟ್ಪಾ ಕಾಯ್ದೆಯ ಸೆಕ್ಸೆನ-೪ ಹಾಗೂ ಸೆಕ್ಸೆನ್-೬ಬಿ ರನ್ವಯ ನಾಮಫಲಕದ ಗೋಡೆ ಬರಹ ಬರೆಸಬೇಕು. ಶಾಲಾ ಕಾಲೇಜುನಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಿಕೊಂಡು ನಿಯಮಗಳ ಕಟ್ಟು ನಿಟ್ಟಿನ ಅನುಷ್ಟಾನವಾಗುವಂತೆ ನೋಡಿಕೊಳ್ಳಬೇಕು. ಕೋಟ್ಪಾ ಕಾಯ್ದೆಯ ಮಾಹಿತಿ ಶಾಲಾ ಕಾಲೇಜಿನಲ್ಲಿ ಲಭ್ಯವಿರಬೇಕು. ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು ಕೊಟ್ಪಾ ಕಾಯ್ದೆಯನ್ವಯ ನಾಮಫಲಕ ಅಳವಡಿಸಿರುವುದನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಂಡ ರಚಿಸಿಕೊಂಡು ಆಗಾಗ ದಾಳಿ ಮಾಡಿ, ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲಕ್ಷ್ಮಣ ನಿಂಬರಗಿ,ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ್ ಸೌದಾಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿವಿ ಕುಂಬಾರ, ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಸಮನ್ವಾಯಾಧಿಕಾರಿ ಟಿ.ಎಚ್.ಕೋಲಾರ,ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಅಪ್ಪಾಸಾಹೇಬ ಇನಾಂದಾರ, ಬಸವನಬಾಗೇವಾಡಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಕವಿತಾ ಸೇರಿದಂತೆ ಅಧಿಕಾರಿ ಉಪಸ್ಥಿತರಿದ್ದರು.

ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಘೋಷಿಸಿ
ತಂತ್ರಾಂಶದಲ್ಲಿ ೩೩೨೫ರ ಶಿಕ್ಷಣ ಸಂಸ್ಥೆಗಳ ಪೈಕಿ ೧೩೫೩ ದಾಖಲಾಗಿದ್ದು, ಬಾಕಿ ಇರುವ ೧೯೭೨ ಸಂಸ್ಥೆಗಳ ಹಾಗೂ ೨೫೩ ಪದವಿಪೂರ್ವ ಶಿಕ್ಷಣ ಇಲಾಖೆ ಸಂಸ್ಥೆಗಳ ಬಾಕಿ ಇರುವ ೫೦ ಸಂಸ್ಥೆಗಳ ದಾಖಲೀಕರಣ ಮುಂದಿನ ಸಭೆಯೊಳಗೆ ಕಡ್ಡಾಯವಾಗಿ ಮಾರ್ಗಸೂಚಿಯಂತೆ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಘೋಷಿಸಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಆನಂದ್ ಸೂಚನೆ ನೀಡಿದರು.