ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸದೃಢವಾದ ಶರೀರದ ರಚನೆಯಲ್ಲಿ ಆಹಾರವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಜನತೆ ಆಹಾರದ ಕಡೆಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದು ಪಟ್ಟಣದ ಖ್ಯಾತ ವೈದ್ಯ ಡಾ. ಎನ್.ಬಿ.ವಜೀರಕರ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಐಕ್ಯೂಎಸಿ,ವಿಜಯಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಮಹಿಳಾ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿದಿನ ಊಟದಲ್ಲಿ ಧಾನ್ಯ, ತರಕಾರಿ ,ದ್ವಿದಳ ಧಾನ್ಯ, ಸಿರಿಧಾನ್ಯ ಮೊಳಕೆ ಒಡೆದ ಕಾಳುಗಳು ಬಳಸಬೇಕು. ಬೇಯಿಸದೇ ಇರುವ ತರಕಾರಿಗಳಾದ ಗಜ್ಜರಿ , ಸೌತೆಕಾಯಿ, ಮೂಲಂಗಿ , ಬಿಟರೂಟ್, ಈರುಳ್ಳಿ , ಬೆಳ್ಳುಳ್ಳಿ ಅನೇಕ ತರಕಾರಿಯನ್ನು ಹೆಚ್ಚಿಗೆ ಬಳಸಬೇಕು. ಮಾಂಸ ಆಹಾರಕ್ಕಿಂತ ಸಸ್ಯ ಆಹಾರವು ಆರೋಗ್ಯಕ್ಕೆ ಹೆಚ್ಚಿನ ಶಕ್ತಿ ತಂದುಕೊಡುತ್ತದೆ. ದೀರ್ಘಕಾಲದವರೆಗೆ ಸದೃಢವಾದ ಶರೀರವನ್ನು ಕಾಪಾಡಿಕೊಳ್ಳಲು ಬೇಕರಿ ಮತ್ತು ಕರಿದ ಪದಾರ್ಥಗಳಿಂದ ದೂರ ಇರಬೇಕು. ವಯಸ್ಕರು ಪ್ರತಿದಿನ ಮೂರರಿಂದ ಮೂರುವರೆ ಲೀಟರ್ ನೀರನ್ನು ಕುಡಿಯುವುದು ಉತ್ತಮ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ವಿ. ಸೂರ್ಯವಂಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರದ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಎ.ಟಿ., ಐಕ್ಯೂಎಸಿ ಸಂಯೋಜಕ ಸಿ.ಪಿ. ಧಡೆಕರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ. ಬಿ.ಎಂ. ಸಾಲವಾಡಗಿ, ಎನ್ಎಸ್ಎಸ್ ಘಟಕದ ಮುಖ್ಯಸ್ಥ ವೈ. ಬಿ. ನಾಯಕ, ಮಹಿಳಾ ವೇದಿಕೆಯ ಅಧ್ಯಕ್ಷ ಡಾ. ಎಸ್. ಬಿ. ಜನಗೊಂಡ, ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಶ್ರೀರಾಮ್ ಬಿಜಾಪುರ, ದೈಹಿಕ ನಿರ್ದೇಶಕ ಎಸ್. ಕೆ. ಚಿಕ್ಕನರ್ತಿ, ಎಂ. ಕೆ. ಯಾದವ, ಎಸ್. ಜೆ. ಸೂರ್ಯವಂಶಿ, ಪಿ.ಎಸ್. ನಾಟೀಕರ, ಜಯರಾಮರೆಡ್ಡಿ ಆರ್.ಎಂ. ಮುಜಾವರ, ಐಶ್ವರ್ಯ ಹಕ್ಕೆ ಇತರರು ಇದ್ದರು.
ಲಕ್ಷ್ಮಿ ಮೆಣಸಿಗಿ ನಿರೂಪಿಸಿದಳು. ಸುನಿತಾ ಕುಳಗೇರಿ ವಂದಿಸಿದಳು.