ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವ್ಯಕ್ತಿ ಶ್ರೀಮಂತನಾಗುತ್ತಾ ಹೋದಂತೆ ವಿಚಾರ ಮತ್ತು ನಡವಳಿಕೆ ಮೃಗವಾಗುತ್ತಾ ಹೋಗಿ ಜ್ಞಾನಿಯಾಗುತ್ತಿದ್ದಂತೆ ಆತನ ವಿಚಾರಗಳಲ್ಲಿ ನಡವಳಿಕೆಗಳಲ್ಲಿ ಗುರುವಾಗುತ್ತಾ ಹೋಗುತ್ತಾನೆ ಎಂದು ಪ್ರಾಚಾರ್ಯ ಕೆ.ಜಿ. ಲಮಾಣಿ ಹೇಳಿದರು.
ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡಗಿಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದ ಸಮಾಜಶಾಸ್ತ್ರದ ಹಿರಿಯ ಉಪನ್ಯಾಸಕರಾದ ಪ್ರೊ: ಬಸವರಾಜ ಜಾಲವಾದಿಯವರ ಅಭಿನಂದನಾ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಿದ್ದರು.
೨೩ ಜಿಲ್ಲೆಗಳಿಗೆ ದೊರೆಯದ ಈ ಪ್ರಶಸ್ತಿ ನಮ್ಮ ಜಿಲ್ಲೆಗೆ ಬಸವಣ್ಣನ ಈ ನೆಲಕ್ಕೆ ಅದೂ ನಮ್ಮ ಕಾಲೇಜಿಗೆ ಇವರ ರೂಪದಲ್ಲಿ ದೊರಕಿದ್ದು ಭಾಗ್ಯವೇ ಸರಿ ಎಂದರು. ಇಂತಹ ಧನಾತ್ಮಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಪ್ರೇರೇಪಣೆಗೊಂಡು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕೆಂದು ಕರೆಕೊಟ್ಟರು.
ಪ್ರಾಸ್ಥಾವಿಕ ಮಾತುಗಳನ್ನಾಡಿದ ಪ್ರೊ: ವ್ಹಿ.ಜಿ. ಕಿವುಡಜಾಡರ್ ಮಾತನಾಡಿ, ಅನುಕರಣನೀಯ ವ್ಯಕ್ತಿತ್ವ ಹೊಂದಿದ ಜಾಲವಾದಿಯವರಿಂದ ವಿದ್ಯಾರ್ಥಿಗಳು ಬಹಳ ಕಲಿಯುವುದಿದೆ. ಇಂತಹ ಅರ್ಹ ವ್ಯಕ್ತಿತ್ವದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದಾಗ ಆ ಪ್ರಶಸ್ತಿಗೆ ಘನತೆ ಬರುತ್ತೆ ಅದಕ್ಕಾಗಿ ರಾಜ್ಯಮಟ್ಟದ ಆಯ್ಕೆ ಸಿಬ್ಬಂದಿಗೆ ಧನ್ಯವಾದಗಳು ಎಂದರು.
ಎಸ್.ಬಿ. ದೇಸಾಯಿ ಮಾತನಾಡಿ, ಧನಾತ್ಮಕ ವಿಚಾರ ಉಳ್ಳವರಿಗೆ ಹಾಗೂ ಸಮಾಜಮುಖಿ ಬದುಕನ್ನು ಅಳವಡಿಸಿಕೊಂಡವರಿಗೆ ಪ್ರಕೃತಿಯು ಎಂದೂ ಕೈಬಿಡುವುದಿಲ್ಲ ಎಂದು ಹೇಳಿದರು.
ಡಾ.ಲಕ್ಷ್ಮಿ ಅಂಗಡಿ, ರೇಖಾ ಜಲದಿ, ಲಕ್ಷ್ಮಿ ಹಂಗರಗಿ, ಮೇಘನಾ ಹೆರಕಲ್ ಮಾತನಾಡಿದರು. ಗೌರಿ, ದಾನೇಶ್ವರಿ, ಪ್ರಜ್ಞಾ, ಪೂಜಾ ಸ್ವಾಗತ ಗೀತೆ ಹಾಡಿದರು. ವೇದಿಕೆಯ ಮೇಲೆ ಶಾಂತಪ್ಪ ಜಾಲವಾದಿ, ಶಾಂತಾಬಾಯಿ ಜಾಲವಾದಿ, ಮಂಜುಳಾ ಜಾಲವಾದಿ, ಮೇಘನಾ ಹೆರಕಲ್, ರಾಜೇಶ್ವರಿ ಜಾಧವ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಪ್ರೊ ಬಸವರಾಜ ಜಾಲವಾದಿ ದಂಪತಿಗಳನ್ನು ಸನ್ಮಾನಿಸಲಾಯಿತು.