ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇದೇ ಅ.೯ ರಂದು ಆಲಮಟ್ಟಿ ಜಲಾಶಯವನ್ನು ೫೧೯.೬ ಮೀ ನಿಂದ ೫೨೪.೨೫೬ ಮೀ ಎತ್ತರದ ಕಾರ್ಯಾಚರಣೆಯನ್ನು ರೈತ ಸಂಘದಿಂದಲೇ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.
ಆಲಮಟ್ಟಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಗ್ಯಾರಂಟಿಗಳ ಭಾಗ್ಯಗಳಲ್ಲಿ, ಅಭಿವೃದ್ಧಿಯ ಗ್ಯಾರಂಟಿ ರಾಜ್ಯ ಸರ್ಕಾರ ಮರೆತಿದ್ದು, ಅದಕ್ಕಾಗಿ ಜಲಾಶಯವನ್ನು ನಾವೇ ರೈತರು ಕೂಡಿಕೊಂಡು ಎತ್ತರಿಸುತ್ತೇವೆ ಎಂದರು.
ಪ್ರತಿ ಗ್ರಾಮ, ಗ್ರಾಮಗಳಲ್ಲಿಯೂ ಜಲಾಶಯ ಎತ್ತರದ ಬಗ್ಗೆ ಅರಿವು ಮೂಡಿಸಲಾಗುವುದು, ಸರ್ಕಾರಕ್ಕೂ ಹೋರಾಟದ ಬಗ್ಗೆ ಮೊದಲೇ ತಿಳಿಸಲಾಗುವುದು ಎಂದರು.
ಕಳೆದ ಶನಿವಾರ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಯಾವ ಪುರುಷಾರ್ಥಕ್ಕಾಗಿ ಕೃಷ್ಣೆಗೆ ಬಾಗಿನ ಅರ್ಪಿಸಿದರು ಎಂಬುದೇ ತಿಳಿಯುತ್ತಿಲ್ಲ. ಯುಕೆಪಿ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷ ತಾಳಿದ್ದಾರೆ, ಯಾವುದೇ ಕಾಲಮಿತಿಯಿಲ್ಲ. ಪೂರ್ಣಗೊಳಿಸುವ ಯಾವುದೇ ಜವಾಬ್ದಾರಿಯೂ ರಾಜ್ಯ ಸರ್ಕಾರಕ್ಕಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಯುಕೆಪಿಯ ವಿಷಯಗಳಲ್ಲಿ ಎಲ್ಲಾ ಪಕ್ಷದವರು ರಾಜಕೀಯ ಮಾಡುತ್ತಲೇ ಸಾಗುತ್ತಿದ್ದಾರೆ. ಈಗ ಭೂಸ್ವಾಧೀನದ ಪ್ರಶ್ನೆ ಎದ್ದಿದ್ದು, ಅದರಲ್ಲಿಯೂ ರಾಜಕೀಯ ನಡೆಯುತ್ತಿದೆ ಎಂದರು.
ಜಲಾಶಯದ ಎತ್ತರದಿಂದ ಬಾಧಿತಗೊಳ್ಳುವ ಪ್ರತಿ ರೈತರಿಗೂ ಗರಿಷ್ಠ ಪರಿಹಾರ ನೀಡಬೇಕು ಎಂದರು.
೧೯೯೯ ರಲ್ಲಿ ಆಗಿನ ರೈತ ಸಂಘದ ರಾಜ್ಯಾಧ್ಯಕ್ಷ ಪ್ರೊ ಎಚ್.ಡಿ. ನಂಜುಂಡಸ್ವಾಮಿ, ಪಂಚಪ್ಪ ಕಲಬುರಗಿ ಹಾಗೂ ನಮ್ಮ ನೇತೃತ್ವದಲ್ಲಿ ಆಲಮಟ್ಟಿಯಲ್ಲಿ ಬೃಹತ್ ಹೋರಾಟ ನಡೆಸಿದೆವು. ಆಗ ಜಲಾಶಯದ ಗೇಟ್ ನ್ನು ೫೧೯.೬ ಮೀಗೆ ಅಳವಡಿಸಿರಲಿಲ್ಲ. ನಮ್ಮ ಹೋರಾಟದ ಬಳಿಕ ಎಚ್ಚೆತ್ತ ಆಗಿನ ಎಸ್.ಎಂ. ಕೃಷ್ಣಾ ಸರ್ಕಾರ ಜಲಾಶಯದ ಗೇಟ್ ಅಳವಡಿಸಲು ತ್ವರಿತ ಕ್ರಮ ಅನುಸರಿಸಿತು. ಈಗ ಅದೇ ಮಾದರಿಯಲ್ಲಿ ಅ.೯ ರಂದು ಹೋರಾಟ ನಡೆಸುತ್ತೇವೆ ಎಂದರು.
ಡೋಣಿ ನದಿ ಪ್ರವಾಹದ ಬಗ್ಗೆಯೂ ಹೋರಾಟ ನಡೆಸಲಾಗುವುದು ಎಂದರು.
ಕಾವೇರಿಯಲ್ಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಎರಡೂವರೆ ವರ್ಷದ ಹಿಂದೆ ಆಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪಾದಯಾತ್ರೆ ನಡೆಸಿದ್ದರು. ಅದೇ ಪಾದಯಾತ್ರೆಯ ಮೂಲಕ ಅಧಿಕಾರಕ್ಕೂ ಬಂದೂ ಎರಡೂವರೆ ವರ್ಷ ಆಗುತ್ತಾ ಬಂತು. ಆದರೆ ಅದರ ಯಾವುದೇ ಕಾರ್ಯವೂ ಆಗಿಲ್ಲ. ಯೋಜನೆಗೆ ಕೇಂದ್ರದ ಅನುಮತಿ ಬೇಕು ಎಂದು ಹೇಳುತ್ತಾ ಸುಮ್ಮನಾಗಿದ್ದಾರೆ. ಕೇಂದ್ರದ ಅನುಮತಿ ಬೇಕಿದ್ದರೇ ಪಾದಯಾತ್ರೆ ಏಕೆ ಮಾಡಬೇಕಿತ್ತು? ಎಂದು ಅವರು ಪ್ರಶ್ನಿಸಿದರು.
ಅದೇ ರೀತಿ ತುಂಗಭದ್ರಾ ಜಲಾಶಯದ ಹಿಂಭಾಗದಲ್ಲಿಯೂ ಸಮನಾಂತರ ಜಲಾಶಯ ನಿರ್ಮಿಸಬೇಕಿದೆ ಎಂದರು.
ಎಲ್ಲದಕ್ಕೂ ಪರಿಸರ, ಅರಣ್ಯ ಕೇಂದ್ರ ಸರ್ಕಾರದ ಅನುಮತಿ ಎಂದು ಹೇಳುತ್ತಾ ಕೂರಬಾರದು. ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರರೆಡ್ಡಿ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದ ಜಲಯಜ್ಞ ಯೋಜನೆಯ ಫಲವಾಗಿ ಅಲ್ಲಿ ಸಂಪೂರ್ಣ ನೀರಾವರಿಯಾಯಿತು. ಅವರು ಯಾವುದೇ ಅನುಮತಿ ಎಂದು ಸುಮ್ಮನೆ ಕೂಡಲಿಲ್ಲ ಎಂದರು.
ಕೃಷ್ಣಾ, ಮಹಾದಾಯಿ, ತುಂಗಭದ್ರಾ ನದಿಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ.
ಇಡೀ ದೇಶದಲ್ಲಿ ಯಾವುದೇ ಚುನಾವಣೆ ನಡೆಯಲಿ ಕರ್ನಾಟಕದಿಂದಲೇ ಹಣ ಹೋಗುತ್ತದೆ, ಅದಕ್ಕಾಗಿ ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.
ನಂತರ ರೈತರೆಲ್ಲಾ ಸೇರಿ ಕೃಷ್ಣೆಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಭಕ್ತರಹಳ್ಳಿ ಭೈರೇಗೌಡ, ಮಹಾದೇವಿ ಬೇನಾಳಮಠ, ಎಸ್.ಬಿ. ಕಂಬೋಗಿ, ಬಸವಂತಪ್ಪ ಕಾಂಬಳೆ, ಚಂದ್ರಶೇಖರ ಜಮಖಂಡಿ, ಮಲ್ಲನಗೌಡ ಪಾಟೀಲ ಶಿವಪುತ್ರ ನಂದಿಹಾಳ, ಮಲ್ಲಿಕಾರ್ಜುನ ನಾವದಗಿ ಮತ್ತೀತರರು ಇದ್ದರು