ಎಸ್.ಬಿ. ವಿಜ್ಡಮ್ ಕರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜ ನಿರ್ಮಾಣದ ಮಹತ್ವದ ಹಾದಿ. ಶಿಕ್ಷಕರಾಗಿ ಹೊರಹೊಮ್ಮಲು CET, TET, CTET ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿರುವ ಈ ಕಾಲದಲ್ಲಿ, ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಉಚಿತ 2 ದಿನಗಳ CET, TET, CTET ಕಾರ್ಯಾಗಾರ ಅತ್ಯಂತ ಸೂಕ್ತವಾಗಿದೆ ಎಂದು ವಿಜಯಪುರದ ಎಸ್.ಬಿ. ವಿಜ್ಡಮ್ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಅಭಿಪ್ರಾಯಪಟ್ಟರು.
ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, “ಶಿಕ್ಷಕರು ಸಮಾಜದ ಕಣ್ಣುಗಳು, ದಾರಿ ತೋರಿಸುವ ದೀಪಸ್ತಂಭರು. ಉತ್ತಮ ಶಿಕ್ಷಕರನ್ನು ರೂಪಿಸಲು ಇಂತಹ ಕಾರ್ಯಾಗಾರಗಳು ಪೂರಕವಾಗುತ್ತವೆ. ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಉಪಯೋಗಿಸಿ, ನಿರಂತರ ಅಭ್ಯಾಸ ಮತ್ತು ಶಿಸ್ತಿನ ಜೀವನವನ್ನು ಅಳವಡಿಸಿಕೊಂಡರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಕಷ್ಟಕರವಾಗುವುದಿಲ್ಲ. CET, TET, CTET ಪರೀಕ್ಷೆಗಳು ವಿದ್ಯಾರ್ಥಿಗಳ ಕನಸುಗಳನ್ನು ನನಸು ಮಾಡುವ ಹಾದಿಯಾಗಬೇಕು, ಅಡ್ಡಿಯಾಗಬಾರದು”ಎಂದು ತಿಳಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಬಿ.ಜಿ. ಮಠ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೇಗೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶ್ರೀಮತಿ ಜೆ.ಸಿ. ನಂದಿಕೋಲ, ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಲಿದೆ ಎಂದರು.
4ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಬೀರಪ್ಪಾ ಪೂಜಾರಿ ಮತ್ತು ನಂದಿತಾ ಹಿರೇಮಠ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗೇಶ ಮುರಡಿ (ಕನ್ನಡ ಉಪನ್ಯಾಸಕರು, ಎಸ್.ಬಿ. ವಿಜ್ಡಮ್, ವಿಜಯಪುರ), ಮಹಾದೇವ ಜಾಧವ ಹಾಗೂ ಸುಧಾಕರ್ ಚವ್ಹಾಣ ಉಪನ್ಯಾಸಕರು ಉಪಸ್ಥಿತರಿದ್ದರು.
ಕುಮಾರಿ ಬಿ.ಬಿ. ಆಯಿಷಾ ನಿರೂಪಿಸಿದರು. ಸುಧಾಕರ್ ಚವ್ಹಾಣ ಸ್ವಾಗತಿಸಿದರು, ಕುಮಾರ ಶರಣಗೌಡ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಶಾಂತ ಕುಲಕರ್ಣಿ, ದಾನಯ್ಯ ಮಠಪತಿ, ಆರ್.ಎ. ಹಾಲಕೇರಿ, ಶ್ರೀಮತಿ ಭಾಗ್ಯಜ್ಯೋತಿ ದಸ್ಮಾ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.