೬೫ ಲಕ್ಷ.ರೂ ಹಣ ಸಂದಾಯವಾದರೂ ದೊರೆಯದ ಜಮೀನು | ಭ್ರಷ್ಟಾಚಾರದಲ್ಲಿ ಅಧಿಕಾರಿ ಶಾಮೀಲಿನ ಶಂಕೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿಷಯದಲ್ಲಿ ಸುಮಾರು ೬೫ ಲಕ್ಷ ರೂ.ಗಳ ಅವ್ಯವಹಾರ ಆಗಿದ್ದು ಕೂಡಲೇ ಇದರ ಕುರಿತು ಕೂಡಲೇ ಕೂಲಂಕುಷ ತನಿಖೆ ನಡೆಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಹಶೀಲ್ದಾರ ಪ್ರಕಾಶ ಸಿಂದಗಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶನಿವಾರ ಆಗಮಿಸಿದ ದಲಿತ ಸಂಘರ್ಷ ಸಮಿತಿ ಹಾಗೂ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಘನತ್ಯಾಜ್ಯ ವಿಲೇವಾರಿ ಘಟಕದ ಜಮೀನಿನ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರುವ ಅವ್ಯವಹಾರದ ಕುರಿತು ತಹಶೀಲ್ದಾರರ ಗಮನ ಸೆಳೆದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಪಟ್ಟಣದ ಘನತ್ಯಾಜ್ಯ ವಿಲೇವಾರಿಗೆ ಅಗತ್ಯವಾದ ಜಮೀನು ಖರೀದಿಗಾಗಿ ೨೦೧೫-೧೬ನೇ ಸಾಲಿನ ೧೪ನೇ ಹಣಕಾಸು ಯೋಜನೆಯಲ್ಲಿ ೧೦.೦೨ ಲಕ್ಷ, ರೂ.ಗಳು ಹಾಗೂ ೧೮-೧೯ನೇ ಸಾಲಿನಲ್ಲಿ ೧೧.೬೪ ಲಕ್ಷ, ರೂ.ಗಳು ಮೀಸಲಾಗಿರಿಸಿ ಇನ್ನೂಳಿದ ೪೩,೬೨,೨೫೦ ಲಕ್ಷ,ರೂ.ಗಳು ಸೇರಿಸಿ ಒಟ್ಟು ೬೫,೩೧,೨೫೦ ಲಕ್ಷ, ರೂ.ಗಳನ್ನು ಸಂಗ್ರಹಿಸಿ ಸಿಂದಗಿ ಪಟ್ಟಣದ ಗುರುಬಾಯಿ ಹಣಮಂತ್ರಾಯ ಸೊನ್ನದ ಇವರ ಕಡೆಯಿಂದ ದಿ:೦೩.೦೩.೨೦೨೦ ರಂದು ರಾಜ್ಯಪಾಲರ ಪರವಾಗಿ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ ದೇವರ ಹಿಪ್ಪರಗಿ ಇವರ ಹೆಸರಿಗೆ ಇಸಾರ ನೊಂದು ಮಾಡಿ ಪೂರ್ಣ ಹಣ ಸಂದಾಯ ಮಾಡಲಾಯಿತು. ಆದರೆ ಈಗ ೨೦೨೫ ಬಂದರೂ ಸಹ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಹೆಸರಲ್ಲಿ ಉತಾರಿ ಆಗದೇ ಇರುವುದು ಅವ್ಯವಹಾರದ ಶಂಕೆ ಮೂಡಲು ಕಾರಣವಾಗಿದೆ.
ಘನ ತ್ಯಾಜ್ಯ ವಿಲೇವಾರಿಗೆ ಅಗತ್ಯವಾದ ರಿ.ಸ.ನಂ ೫೬/೩ರ ೬ ಎಕರೆ ೩೫ ಗುಂಟೆ ಜಮೀನು ಖರೀದಿಗೆ ಸಂಬಂಧಿಸಿದಂತೆ ೨೦೨೦-೨೧ನೇ ಸಾಲಿನಲ್ಲಿ ಸುಮಾರು ೬೫ ಲಕ್ಷ.ರೂ.ಗಳ ದೊಡ್ಡ ಪ್ರಮಾಣದ ಹಣ ನೀಡಿ ಜಮೀನು ಪಡೆಯದೇ ಇರುವ ಅಂದಿನ ಮುಖ್ಯಾಧಿಕಾರಿ ಭಾರಿ ಭ್ರಷ್ಟಾಚಾರ ನಡೆಸಿದ್ದು ಇವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕೂಡಲೇ ಬಂಧಿಸಬೇಕು. ಜೊತೆಗೆ ಗುರುಬಾಯಿ ಸೊನ್ನದ ಅವರ ಹೆಸರಲ್ಲಿರುವ ರಿ.ಸ.ನಂ ೫೬/೩ ರ ೬.೩೫ ಎಕರೆ ಜಮೀನನ್ನು ಕೂಡಲೇ ಪಟ್ಟಣ ಪಂಚಾಯಿತಿ ಹೆಸರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹಸನ್ ನದಾಫ್, ನಬಿಲಾಲ್ ಚಿಕ್ಕಸಿಂದಗಿ, ದಾವುಲ್‌ಸಾಬ್ ಹೆಬ್ಬಾಳ, ರಾವುತ ಅಗಸರ, ರಮೇಶ ಈಳಗೇರ, ಸಂಗನಗೌಡ ಬಿರಾದಾರ, ಹಮೀದ್ ಮುಲ್ಲಾ, ಚಿದಾನಂದ ಬಜಂತ್ರಿ, ಶಿವನಗೌಡ ರುಕುಂಪೂರ, ಇಮಾಮ್ ಮುಲ್ಲಾ, ಪರಶುರಾಮ ಮೇಲಿನಮನಿ, ಪರಶುರಾಮ ನಾಯ್ಕೋಡಿ, ಅಶೋಕ ಕೊಂಡಗೂಳಿ, ಅನೀಲ ಚೌಗಲೆ, ಕಲ್ಲು ದೇವರಮನಿ, ಇಬ್ರಾಹಿಂ ಮಸಳಿ, ಭೀರು ಹಳ್ಳಿ ಇದ್ದರು.