ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ರಾಜ್ಯದಲ್ಲಿ 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ-ಕಾಲೇಜುಗಳಿಗೆ ಎಲ್ಲಾ ಭಾಗ್ಯಗಳ ಜೊತೆ ವೇತನಾನುದಾನ ಭಾಗ್ಯವನ್ನು ನೀಡುವಂತೆ ವಿಜಯಪುರ ಜಿಲ್ಲಾ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಪೂಜಾರಿ ಅವರು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಶನಿವಾರ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರವೇ ರಾಜ್ಯದ ಎಲ್ಲಾ ಭಾಗಗಳಲ್ಲಿ ಶಾಲಾ-ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡಲು ಸಾಧ್ಯವಾಗದ ಕಾರಣ ಖಾಸಗಿಯವರು ಮತ್ತು ಮಠ ಮಾನ್ಯಗಳು ಶಾಲಾ-ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡುತ್ತಾ ಸರ್ಕಾರದ ಜವಾಬ್ದಾರಿಯನ್ನು ಕಡಿಮೆ ಮಾಡಿವೆ. ಸುಪ್ರಿಂ ಕೋರ್ಟ್ತೀರ್ಪಿನ ಪ್ರಕಾರ ಶಿಕ್ಷಣ ನೀಡುವ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಅನುದಾನ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ವಿಚಾರದಲ್ಲಿ ಮಲತಾಯಿ ಧೋರಣೆ ತಳೆದಿರುವುದು ಕನ್ನಡಿಗರ ದುರ್ದೈವ ! ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ವೇತಾನುನುದಾನವನ್ನು ನೀಡಲಾಗುತ್ತಿತ್ತು. ನಂತರ ಈ ಪ್ರಕ್ರಿಯೆ 1986 ಕ್ಕೆ ಸ್ಥಗಿತಗೊಂಡಿತು. 1999 ರಲ್ಲ ಕಾಂಗ್ರೆಸ್ ಸರ್ಕಾರವು 1987 ರಿಂದ 1992 ರವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಸಂಸ್ಥೆಗಳಿಗೆ ವೇತಾನುದಾನವನ್ನು ನೀಡಿತು. ಆನಂತರ 2006 ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರಗಳು 1987 ರಿಂದ 1995 ರವರೆಗೆ ಎಲ್ಲಾ ವರ್ಗದ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾವನ್ನು ನೀಡಿತು. ಅಲ್ಲಿಂದ ಇಲ್ಲಿಯವರೆಗೆ ಒಂದೇ ಒಂದು ವರ್ಷವೂ ವಿಸ್ತರಣೆಯಾಗಲಿಲ್ಲ. 2010 ರಿಂದ ನಿರಂತರವಾಗಿ ಹೋರಾಟ ಮಾಡಿದರೂ ಪ್ರಯೋಜನವಾಗದೇ ಕನ್ನಡ ಶಾಲೆಗಳು ಅವನತಿಯತ್ತ ಸಾಗಿದವು.ನಂತರ 2019 ರಲ್ಲಿ ಶಿಕ್ಷಣಸಚಿವರು ಹಲವು ಸಭೆಗಳನ್ನು ನಡೆಸಿ, ಕನ್ನಡ ಶಾಲೆಗೆ ಅನುದಾನ ಕೊಡಲು ಮನಸ್ಸು ಮಾಡಿ ಇಲಾಖೆಯಿಂದಲೇ ಮಾಹಿತಿಯನ್ನು ಕ್ರೋಢೀಕರಿಸಿ ಐದೈದು ವರ್ಷಗಳಿಗೆ ಬ್ಲಾಕ್ ವಾರು (1995-2000, 2001-2005, 2006-2010, 2011-2015, 2016-2019) ಯೋಜನೆ ರೂಪಿಸಿ, ಬಡ್ಡೆಟ್ ನಲ್ಲಿ ಘೋಷಿಸುವುದಾಗಿ ವಿಧಾನ ಪರಿಷತ್ತಿನಲ್ಲಿ ಸದಸ್ಯರ ಪ್ರಶ್ನೆಗಳಿಗೆ ಭರವಸೆ ನೀಡಿದ್ದರು. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಭಾಗ್ಯಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ 2012 ರ ತನಕ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಸಬೇಕು. ರಾಜ್ಯಾದಾದ್ಯಂತ 29 ವರ್ಷಗಳ ನ್ಯಾಯಯುತ ಬೇಡಿಕೆಯಾದ 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ವೇತನಾನುದಾನವನ್ನು ದೊರಕಿಸಿ ಕನ್ನಡ ಭಾಷೆಯ ಉಳಿವಿಗೆ ಒತ್ತು ನೀಡುವ ಮೂಲಕ ಈ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಸಾವಿರಾರು ಶಿಕ್ಷಕರ ಬದುಕಿಗೆ ಹಾಗೂ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಬಡ ಮಕ್ಕಳಿಗೆ ಆಸರೆಯಾಗಬೇಕೆಂದು ತಮ್ಮಲ್ಲಿ ಕೋರುತ್ತೇವೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವಿವಿಧ ತಾಲೂಕಿನ ಅಧ್ಯಕ್ಷರಾದ ಎಸ್.ಎಸ್.ನಾಗರಬೆಟ್ಟ, ಜಿ.ಜೆ.ಗಿಣ್ಣಿ, ಆರ್.ಬಿ. ಹೊಸೂರ, ಜೀತಪ್ಪ ಕಲ್ಯಾಣಿ, ಎ.ಎಸ್.ದಶವಂತ, ವ್ಹಿ.ಜಿ.ಕುಲಕರ್ಣಿ ಇದ್ದರು.