ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ದಂಧೆ ಅವ್ಯಾಹತವಾಗಿ ಜರುಗುತ್ತಿದ್ದು ಇದನ್ನು ತಡೆಗಟ್ಟಲು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶನಿವಾರ ಆಗಮಿಸಿದ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಅಕ್ಕಿ ಅಕ್ರಮದ ಕುರಿತು ತಹಶೀಲ್ದಾರರ ಗಮನ ಸೆಳೆದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹಸನ ನದಾಫ್ ಮಾತನಾಡಿ, ಸರ್ಕಾರ ಬಡವರಿಗಾಗಿ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲಾಗುತ್ತಿದೆ. ಪಟ್ಟಣ ಸಹಿತ ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ಅಕ್ಕಿ ಸಂಗ್ರಹಣೆಯ ದಂಧೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಿದರು ಯಾವುದೇ ರೀತಿ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಅಕ್ಕಿ ಕಳ್ಳರ ಜೊತೆ ಅಧಿಕಾರಿಗಳು ಶಾಮೀಲು ಆಗಿರುವ ಸಂಶಯ ಮೂಡುತ್ತಿದ್ದು ಕೂಡಲೇ ತಹಶೀಲ್ದಾರ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು.
ಅಕ್ಕಿ ಅಕ್ರಮ ಸಂಗ್ರಹಣೆಯಲ್ಲಿ ತೊಡಗಿದವರನ್ನು ಕೂಡಲೇ ಪತ್ತೆ ಹಚ್ಚಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಸಂಘಟನೆ ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಪ್ರಕಾಶ ಸಿಂದಗಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ, ರಾವುತ ಅಗಸರ, ರಮೇಶ ಈಳಗೇರ, ಸಂಗನಗೌಡ ಬಿರಾದಾರ, ಶಿವನಗೌಡ ರುಕುಂಪೂರ, ಚಿದಾನಂದ ಬಜಂತ್ರಿ, ಪರಶುರಾಮ ನಾಯ್ಕೋಡಿ, ಅನೀಲ ಚೌಗಲೆ, ಪರಶುರಾಮ ಮೇಲಿನಮನಿ, ನಬಿಲಾಲ್ ಚಿಕ್ಕಸಿಂದಗಿ, ದಾವುಲಸಾಬ್ ಹೆಬ್ಬಾಳ, ಹಮೀದ್ ಮುಲ್ಲಾ, ಇಮಾಮ್ ಮುಲ್ಲಾ ಇದ್ದರು.