ಇಟ್ಟಂಗಿಹಾಳದ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್‌ನಲ್ಲಿ ನಡೆದ ಶಿಕ್ಷಕರ ದಿನೋತ್ಸವದಲ್ಲಿ ವಾಗ್ಮಿ ಅಶೋಕ ಹಂಚಲಿ ಶಿಕ್ಷಕರಿಗೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಾಸ್ತವದಲ್ಲಿ ಶಿಕ್ಷಕರು ವಿಶ್ವಗುರು ಭಾರತದ ಕಲ್ಪನೆಯನ್ನು ಬಿತ್ತಿದರೆ ಭವಿಷ್ಯದಲ್ಲಿ ಭಾರತವು ಮತ್ತೊಮ್ಮೆ ವಿಶ್ವಗುರುವಾಗುತ್ತದೆ. ಅದರ ಜೊತೆಗೆ ಮಕ್ಕಳ ಭವಿಷ್ಯವೂ ಕೂಡ ಉಜ್ವಲವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಬೇಕು. ಸೇವಾ ಮನೋಭಾವನೆಯ ಮೂಲಕ ಮಕ್ಕಳಲ್ಲಿ ಕನಸುಗಳನ್ನು ಬಿತ್ತಿ, ಸಂಸ್ಕಾರದ ಗೊಬ್ಬರ ಹಾಕಿ, ಶ್ರೇಷ್ಠತೆಯ ಫಸಲು ತೆಗೆಯಬೇಕು ಎಂದು ಖ್ಯಾತ ವಾಗ್ಮಿ ಅಶೋಕ ಹಂಚಲಿ ಹೇಳಿದರು.
ಇಟ್ಟಂಗಿಹಾಳದಲ್ಲಿರುವ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್‌ನಲ್ಲಿ ಜರುಗಿದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತ ವಿಶ್ವಗುರುವಾಗಿಸುವಲ್ಲಿ ಶಿಕ್ಷಕರ ಪಾತ್ರ ಎನ್ನುವ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ನಮ್ಮ ದೇಶದ ಭವ್ಯ ಪರಂಪರೆ ಹಾಗೂ ಹೋರಾಟದ ಯಶೋಗಾಥೆಯನ್ನು ಮಕ್ಕಳಿಗೆ ಪ್ರತಿದಿನವೂ ಜ್ಞಾಪಿಸಿದಾಗ ಅವರಲ್ಲಿ ದೇಶಾಭಿಮಾನ ಮೂಡುತ್ತದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದಾಗ ಅದರ ಲಾಭ ಭವಿಷ್ಯದ ಭಾರತಕ್ಕೆ ದೊರೆಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ್ ಕೌಲಗಿ ಮಾತನಾಡಿ, ದೇಶದ ಭವಿಷ್ಯ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಶಿಕ್ಷಕರು ಸದಾ ಜ್ಞಾನವನ್ನು ಆಸ್ವಾಧಿಸುವ ಕಾರ್ಯ ಮಾಡಬೇಕು. ಹಾಗೆ ಪಡೆದುಕೊಂಡ ಜ್ಞಾನವನ್ನು ಮಕ್ಕಳಿಗೆ ಹಂಚಬೇಕು ಆಗ ಮಾತ್ರ ಯಶಸ್ವಿ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಡಿಸಿಸಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ವಿ ಡಿ ಮಾದನಶೆಟ್ಟಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಸದಸ್ಯ ರಾಜಶೇಖರ ಕೌಲಗಿ, ಎಕ್ಸಲಂಟ್ ವಿಜ್ಞಾನ ಪ ಪೂ ಕಾಲೇಜಿನ ಉಪ ಪ್ರಾಂಶುಪಾಲ ಮಂಜುನಾಥ ಜುನಗೊಂಡ ಮಾತನಾಡಿದರು.
ಗಾಯಕ ವಿರೇಶ ವಾಲಿ ಸಂಗೀತ ಕಾರ್ಯಕ್ರಮ ಹಾಗೂ ನಟರಾಜ ಡಾನ್ಸ ಅಕಾಡೆಮಿಯ ಪೂರ್ವಿ ತಳವಾರ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನೆರವೇರಿಸಲಾಯಿತು.
ಶಿಕ್ಷಕ ಹರೀಶ ಹಗದಪ್ಪನವರ ಮಠ ನಿರೂಪಿಸಿದರು, ಸಂಜೀವ ಜ್ಯೋಶಿ ಸ್ವಾಗತಿಸಿದರು, ಪಿ.ಕೆ.ಖೇಡಗಿ ವಂದಿಸಿದರು.