ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸದ್ಭಕ್ತರು ಸನ್ಮಾರ್ಗದಡೆಗೆ ಕೊಂಡೊಯ್ಯುವಲ್ಲಿ, ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಸಹಕಾರಿಯಾಗಿದ್ದು, ಜನಸಾಮಾನ್ಯರು ಸತ್ಸಂಗದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಪೂಜ್ಯ ವಿಜಯಾನಂದ ಸ್ವಾಮಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ರವಿವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ದಯೆ, ದಾನ, ಧರ್ಮ, ಕಾಯಕ, ದಾಸೋಹ, ಪರಂಪರೆಯ ತತ್ವಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು, ಅನುದಿನವು ಗುರು ಸನ್ನಿಧಿಯಲ್ಲಿ ಕಾಲ ಕಳೆಯೋಣ ಎಂದರು.
ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ರಮೇಶ ಶಾಸ್ತ್ರಿ ಯಾಳಗಿ ಮಾತನಾಡಿ ಲೋಕ ಕಲ್ಯಾಣಕ್ಕಾಗಿ ಧರ್ಮದ ಜ್ಯೋತಿ ಹೊತ್ತಿಸಿ, ಜ್ಞಾನದ ಬೆಳಕು ಚೆಲ್ಲಿದ ಬಸವಾದಿ ಶರಣರು, ದಾಸ ಶ್ರೇಷ್ಠರು, ಸೂಫಿ ಸಂತರು, ಯೋಗಿಗಳು, ಮಹಾತ್ಮರು, ತೋರಿದ ತತ್ವ, ಚಿಂತನೆಯೊಂದಿಗೆ ಸಾಗಲು ಪ್ರತಿನಿತ್ಯವೂ ಸತ್ಸಂಗದಲ್ಲಿ ಸೇರೋಣ, ಅನುಭವದ ಅಮೃತಧಾರೆ ಸವಿದು ಸದ್ಗುರುವಿನ ಕೃಪೆಗೆ ಪಾತ್ರರಾಗೋಣ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು ಬಾನಂಗಳದಲ್ಲಿರುವ ಸೂರ್ಯ, ಚಂದ್ರಗ ಗ್ರಹಣ ಹಿಡಿಯುವಂತೆ, ಭಕ್ತರ ಬದುಕಲ್ಲಿ ಬರುವ ದುಃಖ, ದುಮ್ಮಾನ, ಒಳಿತು ಕೆಡುಕುಗಳನ್ನು ಮೆಟ್ಟಿ ನಿಂತು ಮಾದರಿ ಬದುಕು ಕಟ್ಟಿಕೊಳ್ಳಲು ಸತ್ಸಂಗ ಸಹಕಾರಿಯಾಗಲಿದೆ ಎಂದು ಆಶಿಸಿದರು.
ಸೋಮನಾಥ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಮುಖ್ಯ ಅತಿಥಿ ಮೋಹನರಡ್ಡಿ ಡಿಗ್ಗಾವಿ ಮಾತನಾಡಿದರು.
ಸಾಹಿತಿ ಶಿಕ್ಷಕ ದೇವಿಂದ್ರಪ್ಪ ಕರಡಕಲ್, ಅಭಿಷೇಕ್ ಪಾಟೀಲ, ಅವ್ವಣ್ಣ ಮಡಿವಾಳಕರ್ ನಿಜಗುಣಿ ವಿಶ್ವಕರ್ಮ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು, ಡಾ ಯಂಕನಗೌಡ ಎಸ್ ಪಾಟೀಲ ನಿರೂಪಿಸಿ ವಂದಿಸಿದರು.