ಡಿ.೦೭ ರಂದು ಬಸವನಾಡಿನಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-೨೦೨೫ ರಲ್ಲಿ ಪಾಲ್ಗೊಳ್ಳಲು ಒಪ್ಪಿಗೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2025ರಲ್ಲಿ ಐರನ್ ಮ್ಯಾನ್ ಖ್ಯಾತಿಯ ಹಿರಿಯ ಐಪಿಎಸ್ ಆಧಿಕಾರಿ ಮತ್ತು ಕೆ.ಎಸ್.ಆರ್.ಪಿ ಐಜಿಪಿ ಸಂದೀಪ ಪಾಟೀಲ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದು, ಈ ಬಾರಿಯ ಓಟಕ್ಕೆ ಮೆರಗು ತರಲಿದೆ.
ಸೋಮವಾರ ಬೆಂಗಳೂರಿನಲ್ಲಿ ಹೆರಿಟೇಜ್ ರನ್ ಪ್ರಾಯೋಜಕರಾದ ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಪಿ. ಕೆ. ಎಂ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಅವರು ಕೆ.ಎಸ್.ಆರ್.ಪಿ ಐಜಿಪಿ ಸಂದೀಪ ಪಾಟೀಲ ಅವರನ್ನು ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.
ಈ ಆಹ್ವಾನಕ್ಕೆ ಸಂತೋಷದಿಂದ ಒಪ್ಪಿಗೆ ಸೂಚಿಸಿದ ಸಂದೀಪ ಪಾಟೀಲ ಅವರು, ಜಲ, ವೃಕ್ಷ, ಶಿಕ್ಷಣ, ಆರೋಗ್ಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಆಯೋಜಿಸಲಾಗಿರುವ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಹೆಮ್ಮೆ ಎನಿಸುತ್ತದೆ. ಐತಿಹಾಸಿಕ ಗೋಳಗುಮ್ಮಟ, ಬಾರಾಕಮಾನ ಮತ್ತೀತರ ಪ್ರಾಚೀನ ಸ್ಮಾರಕಗಳ ಮುಂದೆ ಓಡುವುದು ಓಟಗಾರರಿಗೆ ಸ್ಪೂರ್ತಿ ನೀಡುತ್ತದೆ. ಇದು ಓಟಗಾರರಿಗೆ ಉತ್ತೇಜನವನ್ನೂ ಕೊಡುತ್ತದೆ. ಬೆಂಗಳೂರಿನಲ್ಲಿರುವ ಮ್ಯಾರಾಥಾನ್ ಓಟಗಾರರ ತಂಡಗಳನ್ನು ಸಂಪರ್ಕಿಸಿ ಈ ಬಾರಿ ವಿಜಯಪುರ ಹರಿಟೇಜ್ ರನ್ ನಲ್ಲಿ ಪಾಲ್ಗೋಳ್ಳಲು ಪ್ರೇರೆಪಿಸುವುದಾಗಿ ಅವರು ಹೇಳಿದರು.
ಇತ್ತೀಚೆಗೆ ಡೆನ್ಮಾರ್ಕ್ ನ ಕೊಪನಹೆಗನ್ ನಲ್ಲಿ ವಿಶ್ವ ಟ್ರಯಥ್ಲಾನ್ ಕಾರ್ಪೊರೇಶನ್ ಆಯೋಜಿಸಿದ್ದ ಐರನ ಮ್ಯಾನ್ ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಸಂದೀಪ ಪಾಟೀಲ ಅವರು, ಒಟ್ಟು 14 ಗಂಟೆ 45 ನಿಮೀಷಗಳಲ್ಲಿ ಸಮುದ್ರದಲ್ಲಿ 3.80 ಕಿ. ಮೀ ಈಜುವುದು, ನಂತರ 180 ಕಿ. ಮೀ. ಸೈಕಲ್ ಓಡಿಸುವುದು ಹಾಗೂ ಬಳಿಕ 42 ಕಿ. ಮೀ ಪುಲ್ ಮ್ಯಾರಾಥಾನ್ ಓಡುವ ಮೂಲಕ ಸ್ಪರ್ಧೆಯನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಇಡೀ ಪೊಲೀಸ್ ಇಲಾಖೆ ಮಾತ್ರವಲ್ಲ ಕರ್ನಾಟಕ ಮತ್ತು ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಸಂದೀಪ ಪಾಟೀಲ ಅವರು ಈ ಬಾರಿಯ ವೃಕ್ಷಥಾನ್ ಹೆರಿಟೇಜ್ ರನ್- 2025ರಲ್ಲಿ ಪಾಲ್ಗೋಳ್ಳುತ್ತಿರುವುದು ಮ್ಯಾರಾಥಾನ್ ಎಲ್ಲ ಓಟಗಾರರಿಗೆ ಸಂತಸ ತಂದಿದ್ದು ಯುವ ಓಟಗಾರರಿಗೆ ಸ್ಪೂರ್ತಿ ನೀಡಿದೆ.