ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿನ ಸರ್ವೇ ನಂ.೮೪೨/೨ ಜಾಗೆಯ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸುವ ಕಾರ್ಯ ಸೋಮವಾರ ಪ್ರಾರಂಭಿಸಲಾಗಿದೆ ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಆಡಳಿತ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಒ.೮೪೨ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವ ಯಾವ ಸಮಯದಲ್ಲಿ ಪ್ರಕರಣ ತೀರ್ಪು ಏನಾಗಿದೆ ಎಂಬುದನ್ನು ತಿಳಿಸಿದರು. ಈ ಜಾಗದಲ್ಲಿ ೧೪ಮನೆಗಳು, ೨೦ಕಚ್ಚಾ ಮನೆಗಳು, ೪೧ಶೆಡ್‌ಗಳು, ೯ ಖಾಲಿ ಜಾಗಗಳಿದ್ದು, ಇವುಗಳಲ್ಲಿ ೨೬ ಮಾರಾಟವಾಗಿವೆ ಎಂದರು.
ಸದರಿ ಸರ್ವೇ ನಂ.೮೪೨/೨ರ ಎಕರೆ ೧೦ಗುಂಟೆ ಜಮೀನು ಮರಿಯಂಬಿ ಕರಜಗಿಯವರು ಮಾಲೀಕರೆಂದು ಘೋಷಣೆ ಮಾಡಿ ಸದರಿ ಆಸ್ತಿಯನ್ನು ದಾವೆದಾರರಿಗೆ ಸ್ವಾಧೀನತೆ ನೀಡಲು ನ್ಯಾಯಾಲಯ ಪ್ರತಿವಾದಿಗಳಿಗೆ ಆದೇಶ ಮಾಡಿರುವ ಕಾರಣ ತೆರವು ಕಾರ್ಯಾಚರಣೆ ಪ್ರಾರಂಭ ಮಾಡಲಾಗಿದೆ ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ಮಾತನಾಡಿ, ೮೪೨/೨ರಲ್ಲಿ ವಾಸಿಸುವ ೮೦ಕುಟುಂಬಗಳನ್ನು ತಾತ್ಕಾಲಿಕವಾಗಿ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ, ರಾಜರಾಜೇಶ್ವರಿ ಕಲ್ಯಾಣ ಮಂಟಪ, ಅಬು ಪಂಕ್ಷನ್ ಹಾಲ್, ನಿರಾಶ್ರಿತ ಕೇಂದ್ರ ಸೇರಿದಂತೆ ವಿವಿಧೆಡೆಗೆ ಆಶ್ರಯ ವ್ಯವಸ್ಥೆ ಕಲ್ಪಿಸಲಾಗಿದೆ. ೧೫ಟ್ರ‍್ಯಾಕ್ಟರ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ ಎಂದರು.
ಆಶ್ರಯ ಸಮಿತಿ ಅಧ್ಯಕ್ಷರು ಶಾಸಕರಿರುವ ಕಾರಣ ಅಂತರಗಂಗಿ ರಸ್ತೆಯಲ್ಲಿನ ಸರ್ವೇ ನಂ.೫೬೫ರಲ್ಲಿ ೧೦ ಎಕರೆ ಜಾಗವಿದೆ. ಅದರಲ್ಲಿ ೪೧೧ ನಿವೇಶನಗಳಿದ್ದು, ಈಗಾಗಲೇ ೧೮೦ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಉಳಿದ ನಿವೇಶನಗಳಲ್ಲಿ ಇಲ್ಲಿನ ಫಲಾನುಭವಿಗಳಿಗೆ ನೀಡಲಾಗುವುದು. ಮನೆಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರದ ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡಲಾಗುವುದು ಎಂದರು.
ಈ ವೇಳೆ ಸಿಪಿಐ ನಾನಾಗೌಡ ಪೊಲೀಸಪಾಟೀಲ ಮಾತನಾಡಿ, ತೆರವು ಕಾರ್ಯಾಚರಣೆ ವೇಳೆ ಬಂದೋಬಸ್ತಿಗಾಗಿ ೮೦ಪುರುಷ ಪೊಲೀಸ್ ಸಿಬ್ಬಂದಿ, ೩೦ಮಹಿಳಾ ಪೊಲೀಸ್ ಸಿಬ್ಬಂದಿ, ೬ ಸಬ್ ಇನ್ಸ್ಪೆಕ್ಟರ್, ಇಬ್ಬರು ಎಸ್‌ಐ, ಒಂದು ಐಆರ್‌ಬಿ ಹಾಗೂ ೨ಡಿಆರ್ ವಾಹನ ನಿಯೋಜನೆ ಮಾಡಲಾಗಿತ್ತು ಎಂದು ಹೇಳಿದರು.
ಈ ವೇಳೆ ವಕೀಲ ಜಿ.ಬಿ.ನೆಲ್ಲಗಿ, ಪುರಸಭೆ ಸಿಬ್ಬಂದಿ ಸಿದ್ದು ಅಂಗಡಿ ಇದ್ದರು.