ವಿಜಯಪುರದಲ್ಲಿ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿದ ಮಂಡಳಿ ಅಧ್ಯಕ್ಷ ಬಸನಗೌಡ ತುರವಿಹಾಳಖಾದಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಖಾದಿ ಬಟ್ಟೆ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಖಾದಿ ದೇಶಾಭಿಮಾನದ ಪ್ರತೀಕವಾಗಿದೆ. ಖಾದಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಇಂಡಿ ರಸ್ತೆಯ ಚಾಂದಿನಿ ಫಂಕ್ಷನ್ ಹಾಲ್‌ನಲ್ಲಿ ಸೆ.೮ ರಿಂದ ೧೭ರವರೆಗೆ ಆಯೋಜಿಸಿದ ಖಾದಿ ಉತ್ಸವ-೨೦೨೫ರ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಖಾದಿ ಉತ್ಪಾದನೆಗೆ ಇತಿಹಾಸವಿದೆ. ಖಾದಿ ನಮ್ಮ ಸ್ವಾಭಿಮಾನ-ಸ್ವಾವಲಂಬನೆಯ ಸಂಕೇತವಾಗಿದೆ. ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಖಾದಿ ಉತ್ಪಾದನೆ ಉತ್ತೇಜಿಸಲು ಇಂತಹ ಮಾರಾಟ ಮೇಳಗಳು ಸಹಕಾರಿಯಾಗಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮೇಳಗಳಲ್ಲಿ ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಕೆ.ಕೆ.ಜಿ.ಎಸ್. ಅಧ್ಯಕ್ಷರಾದ ಬಿ.ಬಿ.ಪಾಟೀಲ (ಶೇಗುಣಸಿ), ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಬಿ.ನಟೇಶ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ನಾರಾಯಣ ಡಿ.ಕಾಂಬಳೆ, ಯಾದವಾಡ ಸಿದ್ದನಗೌಡ, ವೆಂಕಟೇಶವರಾವ ಸೇರಿದಂತೆ ವಿವಿಧ ಮಾರಾಟಗಾರರು, ಸಾರ್ವಜನಿಕರು ಉಪಸ್ಥಿತರಿದ್ದರು.

ಸೆ.೮ ರಿಂದ ಸೆ.೧೭ ವರೆಗೆ ಖಾದಿ ಉತ್ಸವ
ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಹತ್ತಿರ ಇರುವ ಚಾಂದನಿ ಪಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಮೋದ್ಯೋಗ ಮಂಡಳಿ ವತಿಯಿಂದ ಸೆಪ್ಟೆಂಬರ್ ೮ ರಿಂದ ಸೆಪ್ಟೆಂಬರ್ ೧೭ರ ವರೆಗೆ ೧೦ ದಿನಗಳ ಕಾಲ ಖಾದಿ ಉತ್ಸವವನ್ನು ಆಯೋಜಿಸಿದೆ. ಬೆಳಿಗ್ಗೆ ೧೦ ರಿಂದ ರಾತ್ರಿ ೯ಗಂಟೆಯವರೆಗೆ ನಡೆಯುವ ಈ ಉತ್ಸವದಲ್ಲಿ ಜಿಲ್ಲೆ,ರಾಜ್ಯ, ಹೊರ ರಾಜ್ಯದ ಖಾದಿ ಉತ್ಪನ್ನಗಳ ಪ್ರದರ್ಶನ ಮಾರಾಟ ನಡೆಯಲಿದೆ.
ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬಳ್ಳಾರಿ, ಕೊಪ್ಪಳ, ಬೀದರ, ಮಂಡ್ಯ ಮೈಸೂರು, ಹಾಗೂ ಹೊರ ರಾಜ್ಯಗಳಿಂದ ವಸ್ತು ಪ್ರದರ್ಶನದಲ್ಲಿ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿವಸ್ತ್ರ, ಶುದ್ಧ ಖಾದಿ ರೇಷ್ಮೆ ಸೀರೆಗಳು, ಕಸೂತಿ ಸೀರೆಗಳು, ಚನ್ನಪಟ್ಟಣ ಗೊಂಬೆಗಳು, ಜಾಕೇಟ್, ಕರದಂಟು, ಸಿಹಿ ತಿಂಡಿಗಳು, ಡಿಜೈನ್ ಬ್ಯಾಗಗಳು, ಬಿದಿರು ಬೆತ್ತ, ರೆಡಿಮೇಡ್ ಶರ್ಟ್ಗಳು ಪಾದರಕ್ಷೆಗಳು ಮೇಳದ ವಿವಿಧ ಮಳಿಗೆಗಳಲ್ಲಿ ಲಭ್ಯವಿದೆ. ಖಾದಿ, ರೇಷ್ಮೆ ಹಾಗೂ ಉಣ್ಣೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಪ್ರಯುಕ್ತ ವಿಶೇಷವಾಗಿ ಶುದ್ಧ ರೇಷ್ಮೆ ಸೀರೆಗಳು ಹೆಚ್ಚಿನ ಪ್ರಮಾಣದಲ್ಲಿ ಈ ಮಾರಾಟ ಮಳಿಗೆಗಳಲ್ಲಿವೆ.
ವಿಜಯಪುರ ಜಿಲ್ಲೆಯ ಸಾರ್ವಜನಿಕರು ಈ ವಸ್ತು ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಖಾದಿ ಉತ್ಪನ್ನಗಳಿಗೆ ಪ್ರೋತ್ಸಾಹಿಸಬೇಕೆಂದು ಜಿಲ್ಲಾ ಖಾದಿ ಗ್ರ‍್ರಾಮೋದ್ಯೋಗ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಖಾದಿ ನಮ್ಮ ದೇಶದ ಅಸ್ಮಿತೆ
“ಖಾದಿ ಉತ್ಸವ ಮನೆ-ಮನಗಳ ಉತ್ಸವವಾಗಬೇಕು, ಅಂದಾಗ ಈ ಉತ್ಸವದ ಸಾರ್ಥಕತೆ ಸಾಕಾರಗೊಳ್ಳುತ್ತದೆ. ಯುವಕರು ಖಾದಿಯ ಬಗ್ಗೆ ಒಲವು ಹೊಂದಿ ಖಾದಿ ಬಟ್ಟೆ ಬಳಸಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಖಾದಿ ಉತ್ಪನ್ನಕ್ಕೆ ಬ್ರ್ಯಾಂಡ್ ಸಿಗುವಂತಾಗಿ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಡಿ-ಕೈಗಾರಿಕೆ ಹಾಗೂ ಉದ್ಯಮಕ್ಕೆ ಬೆಂಬಲ ದೊರಕಬೇಕು. ಈ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹ ನೀಡಬೇಕು.”
– ಸಂಗಮೇಶ ಬಬಲೇಶ್ವರ
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರು