ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರೊ.ಎಮ್ ಎಸ್ ಮದಭಾವಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೊದಲಿನ ಶಿಕ್ಷಣ ವ್ಯವಸ್ಥೆಗೂ ಇಂದಿನ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ಬದಲಾವಣೆಗಳಾಗಿವೆ, ಶಿಕ್ಷಕರು ಕೇವಲ ಪಾಠಗಳನ್ನು ಬೋಧಿಸುವುದರಲ್ಲಿ ಸೀಮಿತವಾಗದೆ, ಹೃದಯವಂತಿಕೆಯೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಜವಾಬ್ದಾರಿಯನ್ನು ಹೊತ್ತಿರಬೇಕು ಎಂದು ವಿಜಯಪುರದ ವಚನಪಿತಾಮಹ ಡಾ. ಫ. ಗು ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಪ್ರೊ.ಎಮ್ ಎಸ್ ಮದಭಾವಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಎಸ್. ರಾಧಾಕೃಷ್ಣನ್ ಅವರ ಶಿಕ್ಷಣ ತತ್ವಗಳು ಹಾಗೂ ಮೌಲ್ಯಗಳು ಇಂದಿಗೂ ದಿಕ್ಕು ತೋರುತ್ತಿವೆ. ಶಿಕ್ಷಕರು ಕೇವಲ ಪಾಠವನ್ನು ಕಲಿಸುವವರಲ್ಲ, ಅವರು ಸಮಾಜಕ್ಕೆ ಆದರ್ಶ ವ್ಯಕ್ತಿತ್ವವನ್ನು ನೀಡುವವರಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಐ.ಕ್ಯೂ.ಎ.ಸಿ ಡೈರಕ್ಟರ್ ಪ್ರೊ.ಪಿ.ಜಿ ತಡಸದ ಮಾತನಾಡಿ, ಇವತ್ತಿನ ತಂತ್ರಜ್ಞಾನ ಯುಗದಲ್ಲಿ, ಶಿಕ್ಷಕರು ಮುಂಬರುವ ಸವಾಲುಗಳನ್ನು ಎದುರಿಸಿ, ಹೊಸ ಹೊಸ ಬಗೆಯ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡು, ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಲು ಸಿದ್ಧರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಕಂಪ್ಯೂಟರ್, ಅಂತರಜಾಲ ಸಂಪರ್ಕ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ವಿಷಯವನ್ನು ಸಂರ್ಗಹಿಸಿ, ಜ್ಞಾನವನ್ನು ಪಡೆಯುವುದರ ಜೊತೆಗೆ ಪಠ್ಯ ಪುಸ್ತಕಗಳನ್ನು ಸವಿಸ್ತಾರವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಪ್ರೊ.ವೆಂಕೋಬ ನಾರಾಯಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಡಾ.ರೂಪಾ ನಾಯಿಕೋಡಿ ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿ ಸರಸ್ವತಿ ಬೆಳ್ಳುಂಗಡಿಗಿ ವಂದಿಸಿದರು.